ಚಿನ್ನಾಭರಣ ಕಳವು
ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ್ದ ಅಲೆವೂರು ಯೋಗೀಶ್ ಆಚಾರ್ಯ ಅವರಿಗೆ ಸೇರಿದ ಚಿನ್ನಾಭರಣ ಮಳಿಗೆಯಲ್ಲಿ ಮಂಗಳವಾರ 5 ಮಂದಿ ಬಂದು ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ನಗರದಲ್ಲಿನ ಜ್ಯುವೆಲ್ಲರ್ಸ್ ಆಭರಣದ ಅಂಗಡಿಗೆ ಬಂದ ಸುಮಾರು 40- 45 ವರ್ಷ ಪ್ರಾಯದ 4 ಜನ ಗಂಡಸರು ಹಾಗೂ 45 ವರ್ಷ ಪ್ರಾಯದ ಹೆಂಗಸು ಆಭರಣ ಖರೀದಿಸುವಂತೆ ನಟಿಸಿ, ಅಂಗಡಿಯಲ್ಲಿದ್ದವರ ಗಮನಕ್ಕೆ ಬಾರದ ರೀತಿಯಲ್ಲಿ 7 ಚಿನ್ನದ ಕರಿಮಣಿ ಸರ (ಸುಮಾರು 140 ಗ್ರಾಂ) ಇದ್ದ ಟ್ರೇಯನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಅಭರಣದ ಅಂದಾಜು ಮೌಲ್ಯ ಸುಮಾರು ರು. 3 ಲಕ್ಷ ಎಂಬುದಾಗಿ ಯೋಗೀಶ್ ಆಚಾರ್ಯ ಅವರು ನೀಡಿದ ದೂರಿನಂತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಸಂಸ್ಥೆಯಿಂದ ವಂಚನೆ: ದೂರು
ಮಣಿಪಾಲ: ಇಲ್ಲಿನ ನಿಯೋ ಸಾಫ್ಟ್ ಪಬ್ಲಿಕೇಶನ್ ಮಾರ್ಕೇಟಿಂಗ್ ಮತ್ತು ಇನ್ಫಾರ್ಮೇಷನ್ ಸೆಂಟರ್ ಎಂಬ ಹೆಸರಿನ ಸಂಸ್ಥೆಯೊಂದು ಸಾವಿರಾರು ಮಂದಿಗೆ ಕೋಟ್ಯಂತರ ರುಪಾಯಿ ವಂಚಿಸಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಸ್ಥೆಯ ಸುಮಾರು ರಾಜ್ಯದಾದ್ಯಂತ ಸುಮಾರು 50 ಸಾವಿರ ಮಂದಿ ಚಂದಾರಾರನ್ನು ನೋಂದಾಯಿಸಿಕೊಂಡಿದ್ದು, ಅವರಿಗೆ ಆರೋಗ್ಯ, ಶಿಕ್ಷಣ, ಕೃಷಿ, ಉದ್ಯೋಗ, ಸಾಲ ಇತ್ಯಾದಿ ಸೌಲಭ್ಯಗಳನ್ನು ನೀಡುವುದಾಗಿ ಹೇಳಿ ಹಣ ಪಡೆದುಕೊಂಡಿತ್ತು.
ಅಲ್ಲದೇ ಈ ಸಂಸ್ಥೆಯ ರಾಜ್ಯದ ವಿವಿಧ ಶಾಖೆಗಳಲ್ಲಿ ಸುಮಾರು 3 ಸಾವಿರ ಮಂದಿ ಸಿಬ್ಬಂದಿಯಿದ್ದು, ಅವರಿಂದ ಭದ್ರತಾ ಠೇವಣಿಯಾಗಿ ರು. 20 ಸಾವಿರ ಪಡೆದುಕೊಂಡಿತ್ತು. ಇದೀಗ ಸಂಸ್ಥೆಯ ಬಾಗಿಲು ಮುಚ್ಚಿದ್ದು, ಚಂದಾದಾರರ ಹಣ, ಸೌಲಭ್ಯಗಳನ್ನು, ಸಿಬ್ಬಂದಿಯ ಭದ್ರತಾ ಠೇವಣಿ ಮತ್ತು 3 - 4 ತಿಂಗಳ ವೇತನವನ್ನು ನೀಡದೆ ವಂಚಿಸಲಾಗಿದೆ ಎಂದು ಅಶೋಕ್ ಎಂಬವರು ಸಂಸ್ಥೆಯ ಆಡಳಿತ ನಿರ್ದೇಶಕ ಎನ್. ನಾಗರಾಜ್, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿಕಾಸ್ .ಎನ್ ಮತ್ತು ಉಪನಿರ್ದೇಶಕ ಮಂಜುನಾಥ ನಾಯಕ್ ವಿರುದ್ಧ ಮಣಿಪಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಪಘಾತ: ಇಬ್ಬರಿಗೆ ಗಂಭೀರ ಗಾಯ
ವಿಟ್ಲ: ಬೈಕೊಂದು ರಸ್ತೆಯಲ್ಲಿ ಉರುಳಿ ಬಿದ್ದು, ಸವಾರರಿಬ್ಬರಿಗೆ ಗಂಭೀರ ಗಾಯವಾದ ಘಟನೆ ವಿಟ್ಲ ಕಬಕ ಮಾರ್ಗದಲ್ಲಿ ಮಂಗಳವಾರ ನಡೆದಿದೆ. ವಿಟ್ಲ ಕಬಕ ಮಾರ್ಗದ ಅಳಿಕೆಮಜಲಿನಲ್ಲಿ ಕಿಶೋರ್ ಕುಮಾರ್ ಚಲಾಯಿಸುತ್ತಿದ್ದ ಬೈಕ್ ರಸ್ತೆಯಲ್ಲಿ ಮಗುಚಿ ಬಿದ್ದಿದೆ. ಪರಿಣಾಮ ಸವಾರ ಮತ್ತು ಹಿಂಬದಿ ಸವಾರ ನವೀನ್ ಗಂಭೀರ ಗಾಯಗೊಂಡಿದ್ದಾರೆ. ನವೀನ್ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಕಿಶೋರ್ ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕ ಆತ್ಮಹತ್ಯೆ
ಮೂರ್ನಾಡು: ಜೀವನದಲ್ಲಿ ಜಿಗುಪ್ಸೆಗೊಂಡ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊದ್ದೂರು ಗ್ರಾಮದಲ್ಲಿ ನಡೆದಿದೆ. ಹೊದ್ದೂರು ಗ್ರಾಮದ ನಿವಾಸಿ ಅಮ್ಮಣ್ಣಂಡ ಕಾರ್ಯಪ್ಪ ಅವರ ಪುತ್ರ ಎ.ಕೆ. ಶರತ್ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಕಳೆದ ಮೂರು ದಿನಗಳಿಂದ ಕಾಣೆಯಾಗಿದ್ದು ಹೊದ್ದೂರು ಗ್ರಾಮದ ಕೂಡಂಡ ಗಿರೀಶ್ ಅವರ ತೋಟದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಸೋಮವಾರ ಸಂಜೆ ಪತ್ತೆಯಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳ್ಳಭಟ್ಟಿ: ಆರೋಪಿಗೆ ನ್ಯಾಯಾಂಗ ಬಂಧನ
ಸುಳ್ಯ: ಪಟ್ಟಣದ ಕೊರಂಬಡ್ಕ ಕೊಡಂಕೇರಿ ಎಂಬಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಸಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಅಬಕಾರಿ ಪೋಲೀಸರು ಬಂಧಿಸಿದ್ದಾರೆ. ಚಿದಾನಂದ ಕುದ್ಪಾಜೆ ಎಂಬಾತ ಕಳ್ಳಭಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ. ಅಬಕಾರಿ ನಿರೀಕ್ಷಕ ರಾಜೇಶ್ ನಾಯಕ್ ನೇತೃತ್ವದಲ್ಲಿ ಪೋಲೀಸರು ದಾಳಿ ನಡೆಸಿ 5 ಲೀ. ಕಳ್ಳಭಟ್ಟಿ ಸಾರಾಯಿ ಸಹಿತ ಆರೋಪಿಯನ್ನು ವಶಕ್ಕೆ ತೆಗೆದುಕೊಂಡರು. ಆರೋಪಿಗೆ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದೆ. ಅಬಕಾರಿ ರಕ್ಷಕರಾದ ವಿಜಯ ಕುಮಾರ್, ಸಿಬ್ಬಂದಿ ನೀಲಾಧರ್, ಬಾಲಕೃಷ್ಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.