ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಅಧಿಕಾರ 'ಕೈ'ಗೆ ಬಂದರೆ ನ್ಯಾ. ಹೆಗ್ಡೆ ವರದಿ ಆಧರಿಸಿ ತಪ್ಪಿತಸ್ಥರಿಗೆ ಶಿಕ್ಷೆ: ಮೊಯ್ಲಿ

Lingaraj Badiger
Updated On : 18 Apr 2013, 12:00 pm

ಉಡುಪಿ: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಪ್ರಥಮವಾಗಿ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರು ನೀಡಿರುವ ವರದಿಯ ಆಧಾರದ ಮೇಲೆ ರಾಜ್ಯದಲ್ಲಿ 16,500 ಕೋಟಿ ಲೂಟಿ ಮಾಡಿರುವ ಬಿಜೆಪಿಯ 20 ಮಂದಿ ಮಂತ್ರಿಗಳು ಸೇರಿ ಎಲ್ಲ ಆರೋಪಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಎಂ. ವೀರಪ್ಪ ಮೊಯ್ಲಿ ಘೋಷಿಸಿದ್ದಾರೆ.
 ಉಡುಪಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅದಕ್ಕಾಗಿ ಎಷ್ಟು ಬೇಕೋ ಅಷ್ಟು ಸಂಖ್ಯೆಯಲ್ಲಿ ವಿಶೇಷ ತ್ವರಿತ ನ್ಯಾಯಾಲಯಗಳನ್ನು ಆರಂಭಿಸಲಾಗುವುದು ಮತ್ತು 6 ತಿಂಗಳಲ್ಲಿ ತನಿಖೆ, ವಿಚಾರಣೆ ಪೂರ್ಣಗೊಳಿಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುವುದು ಎಂದವರು ಹೇಳಿದರು.
12ನೇ ಸ್ಥಾನಕ್ಕೆ ಕುಸಿದ ರಾಜ್ಯ: ಅಭಿವೃದ್ಧಿಯಲ್ಲಿ ಕರ್ನಾಟಕ ರಾಜ್ಯ 1994ರಲ್ಲಿ 3ನೇ ಸ್ಥಾನದಲ್ಲಿ, 2004ರಲ್ಲಿ 4ನೇ ಸ್ಥಾನದಲ್ಲಿತ್ತು, ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಮೇಲೆ 12ನೇ ಸ್ಥಾನಕ್ಕೆ ಕುಸಿದಿದೆ ಎಂದು ಯೋಜನಾ ಆಯೋಗದ ವರದಿ ತಿಳಿಸಿದೆ. ಇದು ಬಿಜೆಪಿ ಪಕ್ಷದ ಸಾಧನೆ ಎಂದವರು ಟೀಕಿಸಿದರು.
 ರಾಜ್ಯದಲ್ಲಿ ಬಿಜೆಪಿ 3 ಹೋಳಾಗಿ ಬೇರೆ ಪಕ್ಷಗಳಾಗಿವೆ ಮತ್ತು ಅವು ಬಿಜೆಪಿಯನ್ನು ಸೋಲಿಸುತ್ತಿವೆ. ಜೆಡಿಎಸ್ ರಾಜ್ಯದಲ್ಲಿ ಕೇವಲ 4 ಜಿಲ್ಲೆಗಳಿಗೆ ಸೀಮಿತವಾಗಿದೆ.
ಆದ್ದರಿಂದ ಈ ಎರಡೂ ಪಕ್ಷಗಳು ಜನರಿಂದ ತಿರಸ್ಕರಿಸಲ್ಪಡುತ್ತವೆ. ಸಮ್ಮಿಶ್ರ ಸರ್ಕಾರವನ್ನು ರಾಜ್ಯದ ಜನತೆ ಈಗಾಗಲೇ ನೋಡಿದ್ದಾರೆ.
ಆದ್ದರಿಂದ ಮತ್ತೆ ಅತಂತ್ರ ಸರ್ಕಾರಕ್ಕೆ ಅವಕಾಶ ನೀಡುವುದಿಲ್ಲ, ಮುಂದೇನಿದ್ದರೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದವರು ಭವಿಷ್ಯ ನುಡಿದರು.
 ಕಾಂಗ್ರೆಸ್ ಹಣ್ಣು ತುಂಬಿದ ಮರದಂತಿದೆ, ಅವುಗಳಲ್ಲಿ ಕೆಲವು ಹಣ್ಣುಗಳು ಪೂರ್ಣ ಮಾಗುವುದಕ್ಕೆ ಮೊದಲೇ ಉದುರುತ್ತಿವೆ, ಅವುಗಳನ್ನು ಬಿಜೆಪಿ, ಜೆಡಿಎಸ್ ನಾಮುಂದು, ತಾಮುಂದು ಎಂದು ಹೆಕ್ಕಿಕೊಳ್ಳುತ್ತಿವೆ, ಆ ಪಕ್ಷಗಳ ಬಗ್ಗೆ ನನಗೆ ಕನಿಕರ ಇದೆ ಎಂದು ಅವರು ಲೇವಡಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement