'ನಮ್ಮ ಗ್ರಾಮ ನಮ್ಮ ಮಕ್ಕಳು' ಶಿಬಿರ
ಕುಂದಾಪುರ: ಇಂದಿನ ಸಾಮಾಜಿಕ ಸ್ಥಿತ್ಯಂತರ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಸ್ಫೂರ್ತಿ ತುಂಬುವ ಕೆಲಸ ರಜಾ ಶಿಬಿರಗಳಿಂದ ಆಗುತ್ತಿದೆ. ಭಾವನಾತ್ಮಕ ಭಾಗವಹಿಸುವಿಕೆ ಮತ್ತು ಸೃಜನಶೀಲತೆಗೆ ಇವು ಒತ್ತು ನೀಡುತ್ತವೆ ಎಂದು ರಾಜ್ಯ ಪ್ರಶಸ್ತಿ ಪುರಸ್ಕೃತ ಮುಖ್ಯಶಿಕ್ಷಕ ಕೆ.ಎನ್. ಚಂದ್ರಶೇಖರ ಶೆಟ್ಟಿ ಹೇಳಿದ್ದಾರೆ.
ಬಾಳ್ಕುದ್ರು ಹಂಗಾರಕಟ್ಟೆಯ ಅಭಿವೃದ್ಧಿ ಸಂಸ್ಥೆ, ಕಾಳಾವರ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಆಶ್ರಯದಲ್ಲಿ ಕಾಳಾವರದಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಮೂರು ದಿನಗಳ 'ನಮ್ಮ ಗ್ರಾಮ ನಮ್ಮ ಮಕ್ಕಳು' ಕ್ರಿಯಾತ್ಮಕ ಶಿಬಿರ ಉದ್ಘಾಟಸಿ ಅವರು ಮಾತನಾಡಿದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಕಲ್ಪನಾ ಭಾಸ್ಕರ, ಶಾಲೆಯ ಮುಖ್ಯ ಶಿಕ್ಷಕ ಸಚ್ಚಿದಾನಂದ ಹೆಗ್ಡೆ, ದೈಹಿಕ ಶಿಕ್ಷಕ ಬಾಲಕೃಷ್ಣ ಶೆಟ್ಟಿ ವಕ್ವಾಡಿ, ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ಶಿಬಿರ ನಿರ್ದೇಶಕ ರಮೇಶ್ ವಕ್ವಾಡಿ ಸಭೆಯಲ್ಲಿದ್ದರು.
ರಮೇಶ್ ವಕ್ವಾಡಿ ಶಿಬಿರದ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಭಾರತಿ ಬೈಂದೂರು ನಿರೂಪಿಸಿದರು. ಶ್ರೀರಕ್ಷಾ ವಕ್ವಾಡಿ ವಂದಿಸಿದರು. ಮೂರು ದಿನಗಳ ಕಾಲ ನಡೆದ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಶಾಲಾ ಮುಖ್ಯಶಿಕ್ಷಕ ಸಚ್ಚಿದಾನಂದ ಹೆಗ್ಡೆ ಮತ್ತು ಶಿಬಿರ ನಿರ್ದೇಶಕ ರಮೇಶ್ ವಕ್ವಾಡಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಅನಿಸಿಕೆಗಳು ಮತ್ತು ಅವರು ತಯಾರಿಸಿದ ವಿವಿಧ ಮುಖವಾಡಗಳು, ಗ್ಲಾಸ್ ಪೈಂಟಿಂಗ್, ಮಣಿಸರ, ಹೂದಾನಿ, ಚಿತ್ರಕಲೆ, ವಿವಿಧ ಕಸೂತಿಗಳು ಪ್ರದರ್ಶಿಸಲ್ಪಟ್ಟವು. ಸುಮಾರು 132ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.