ಮಹಿಳೆಗೆ ಕಿರುಕುಳ: ಆರೋಪಿಗೆ 1 ವರ್ಷ ಜೈಲು
ಉಡುಪಿ: ಗ್ರಾಮ ಪಂಚಾಯಿತಿ ಕಾರ್ಯದರ್ಶಿಯೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವರ ಮಾನ ನಷ್ಟವನ್ನುಂಟು ಮಾಡಿದ ಆರೋಪಿಗೆ ಉಡುಪಿ ಜಿಲ್ಲಾ ನ್ಯಾಯಾಲಯ 1 ವರ್ಷದ ಜೈಲು ಶಿಕ್ಷೆ ವಿಧಿಸಿದೆ.
ಶಿಕ್ಷೆಗೆ ಗುರಿಯಾದವರು ಕುಂದಾಪುರ ತಾಲೂಕಿನ ಮರವಂತೆ ಗ್ರಾಮದ ನಿವಾಸಿ ಮನ್ಸೂರ್ ಇಬ್ರಾಹಿಂ (38).
ಈತ ಕಳೆದ ವರ್ಷ ಆಲೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸೀತಾ ಅವರು ಕರ್ತವ್ಯಕ್ಕೆ ಹೋಗದಂತೆ ಅಡ್ಡಿಯನ್ನುಂಟು ಮಾಡುತ್ತಿದ್ದ. ಅಲ್ಲದೇ ಆಕೆಯನ್ನು ಮದುವೆಯಾಗಲಿದ್ದ ಹುಡುಗನ ಮನೆಗೆ ಹೋಗಿ ಆಕೆಗೆ ಬೇರೆಯವರೊಂದಿಗೆ ಸಂಬಂಧವಿದೆ ಹಾಗೂ ತನ್ನನ್ನು ಪ್ರೀತಿಸುತ್ತಾಳೆ ಎಂದು ಸುಳ್ಳು ಹೇಳಿ ಮದುವೆ ತಪ್ಪಿಸಿದ್ದ.
ಆಕೆಯನ್ನು ಕಾರಿನಲ್ಲಿ ಹಿಂಬಾಲಿಸುವುದು, ಆಕೆ ಜಾತಿ ನಿಂದನೆ ಮಾಡುವುದು, ಮೊಬೈಲಿನಿಂದ ಅಶ್ಲೀಲ ಸಂದೇಶಗಳನ್ನು ಕಳುಹಿಸುವುದು, ಈಕೆಯ ಬಗ್ಗೆ ಕರಪತ್ರಗಳನ್ನು ಮುದ್ರಿಸಿ ವಿತರಿಸುವುದು ಮಾತ್ರವಲ್ಲ ಕೊಲೆ ಮಾಡುವುದಾಗಿ ಬೆದರಿಸಿದ್ದ. ಈ ಬಗ್ಗೆ ಸೀತಾ ಅವರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ನರೇಂದ್ರಕುಮಾರ ಗುಣಕಿ ಅವರು ಆರೋಪಿಗೆ ಗುರುವಾರ ವಿವಿಧ ಅಪರಾಧಗಳಡಿ ಒಟ್ಟು 1 ವರ್ಷ ಶಿಕ್ಷೆ ಹಾಗೂ ರು. 1500 ದಂಡ ವಿಧಿಸಿದ್ದಾರೆ. ದೂರುದಾರರ ಪರವಾಗಿ ಪಬ್ಲಿಕ್ ಪ್ರಾಸಿಕ್ಯುಟರ್ ಟಿ.ಎಸ್. ಜಿತೂರಿ ವಾದಿಸಿದ್ದರು.