ರಾಜಕೀಯ ಪಕ್ಷಗಳಿಗಿಲ್ಲ ರೈತರ ಕಾಳಜಿ: ಪೇಜಾವರ ಶ್ರೀ
ಉಡುಪಿ: ನಮ್ಮ ರಾಜ್ಯದ ರಾಜಕೀಯ ಪಕ್ಷಗಳಿಗೆ ರೈತರ ಹಿತ ರಕ್ಷಣೆಯ ಪ್ರಾಮಾಣಿಕ ಕಳಕಳಿ ಇಲ್ಲ. ಭಾರಿ ಉದ್ದಿಮೆಗಳ ಸ್ಥಾಪನೆಗೆ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಬಳಸಿಕೊಳ್ಳುವುದಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಬೆಂಬಲ ನೀಡುತ್ತಿವೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಅವರು ಸೋಮವಾರ ಉಡುಪಿ ಜಿಲ್ಲಾ ಭಾರತೀಯ ಕಿಸಾನ್ ಸಂಘದ 'ಜಿಲ್ಲಾ ರೈತ ಸಮ್ಮೇಳನ'ವನ್ನು ಉದ್ಘಾಟಿಸಿ ಮಾತನಾಡಿದರು. ಕೃಷಿ ಲಾಭದಾಯಕ ಅಲ್ಲ ಎಂದು ಯುವಜನರು ಇಂದು ಬೇರೆ ಉದ್ಯೋಗಗಳತ್ತ ವಲಸೆ ಹೋಗುತ್ತಿದ್ದಾರೆ. ಇದರಿಂದ ಮುಂಬರುವ ದಿನಗಳಲ್ಲಿ ಆಹಾರದ ಕೊರತೆ ಉಂಟಾಗಬಹುದು. ಇದನ್ನು ತಡೆಯಬೇಕಾದರೆ ಬೆಳೆಗಳಿಗೆ ಯೋಗ್ಯ ಬೆಲೆ ದೊರಕಬೇಕು. ಜೊತೆಗೆ ರೈತರು ತಮ್ಮ ಕಾಯಕವನ್ನು 'ದೇವರ ಪೂಜೆ', 'ರಾಷ್ಟ್ರೀಯ ಧರ್ಮ' ಎಂದು ತಿಳಿಯಬೇಕು. ರೈತರ ಭೂಮಿ ರೈತನ ಕೈಯಲ್ಲಿಯೇ ಉಳಿಯಬೇಕು ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿ ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಹಾಲಿ ಉತ್ಪಾದಕರಿಗೆ ಇಂದು ದೊರೆಯುತ್ತಿರುವ ಉತ್ತಮ ಬೆಳೆಗಳ ರೀತಿಯಲ್ಲಿಯೇ ಬೇರೆ ಕೃಷಿ ಉತ್ಪನ್ನಗಳಿಗೂ ಒಂದು ನಿರ್ದಿಷ್ಟವಾದ ಬೆಲೆ ಸಿಗಬೇಕು ಎಂದರು. ಬಳಿಕ ನಡೆದ ಗೋಷ್ಠಿಯಲ್ಲಿ ಕೃಷಿ ಮಾರುಕಟ್ಟೆಯ ಸವಾಲುಗಳು, ಸಾವಯುವ ಕೃಷಿ ಮತ್ತು ಪ್ರಯೋಗ, ಹೈನುಗಾರಿಕೆ ಅಳಿವು - ಉಳಿವು, ಇಂದಿನ ಕೃಷಿ ಸವಾಲು, ಕೃಷಿಯಲ್ಲಿ ಯಾಂತ್ರೀಕರಣ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು