'ಕಾಂಗ್ರೆಸ್‌ಗೆ ಬಾಡಿಗೆ ಕಾರ್ಯಕರ್ತರೇ ಗತಿ'
ಕಾಪು : ಟಿಕೆಟ್ ವಂಚಿತರ ಭಿನ್ನಮತದಿಂದ ಕಂಗೆಟ್ಟಿರುವ ಕಾಪು ಕಾಂಗ್ರೆಸ್, ಇದೀಗ ಪ್ರಚಾರಕ್ಕೂ ಕಾರ್ಯಕರ್ತರಿಲ್ಲದೇ ಸಂಪೂರ್ಣ ಕಂಗಲಾಗಿದೆ. ಆದ್ದರಿಂದ ಅದು ಜೆಡಿಎಸ್ ಅಥವಾ ಬಿಜೆಪಿಗೆ ಸ್ಪರ್ಧೆ ನೀಡುವ ಪಕ್ಷಕ್ಕೆ ಬಿಜೆಪಿ ಸ್ಪರ್ಧಿಯೇ ಹೊರತು ಕಾಂಗ್ರೆಸ್ ಪಕ್ಷವಲ್ಲ ಎಂದು ಉಡುಪಿ ಜಿಲ್ಲಾ ಜಾತ್ಯತೀತ ಜನಾತದಳ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ಕಟಪಾಡಿ ಕೋಟೆ ಪರಿಸರದಲ್ಲಿ ಜೆಡಿಎಸ್ ಅಭ್ಯರ್ಥಿ ವಸಂತ ವಿ. ಸಾಲ್ಯಾನ್ ಪರ ಮತಯಾಚನೆ ಸಂದರ್ಭದಲ್ಲಿ ಮಾತನಾಡಿದ ಅವರು ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿರುವ ಕಾಂಗ್ರೆಸ್ ಪಕ್ಷ ಈಗ ಹಣವನ್ನು ನೀರಿನಂತೆ ಖರ್ಚು ಮಾಡಿ ಬಾಡಿಗೆ ಕಾರ್ಯಕರ್ತರನ್ನು ನಿಯೋಜಿಸಿಕೊಳ್ಳುವ ಹಂತಕ್ಕೆ ಬಂದು ತಲುಪಿದೆ ಎಂದು ಟೀಕಿಸಿದರು.
ಪಟ್ಟುಬಿಡದೆ ಕಾರ್ಯನಿರ್ವಹಿಸಿದ ಮತ್ತು ಜಾತಿಭೇದವಿಲ್ಲದೆ 4 ದಶಗಳ ಕಾಲ ಕಾಪು ಕ್ಷೇತ್ರದಲ್ಲಿ ಸಮಾಜಮುಖಿ ರಾಜಕೀಯ ನಡೆಸಿದ ಮಾಜಿ ಸಚಿವ ವಸಂತ ವಿ. ಸಾಲ್ಯಾನ್ ಅವರನ್ನು ಕಾಂಗ್ರೆಸ್ ಪಕ್ಷ ನಡೆಸಿಕೊಂಡ ರೀತಿ ಅಮಾನವೀಯ ಎಂದ ಅವರು ಚುನಾವಣೆಯ ಬಳಿಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಹಾಗೂ ಆ ಸಚಿವ ಸಂಪುಟದಲ್ಲಿ ವಂಸತ ವಿ. ಸಾಲಿಯಾನ್ ಜಿಲ್ಲಾ ಉಸ್ತುವಾರಿ ಸಚಿವರಾಗಲಿದ್ದಾರೆ ಎಂದರು.
ವಾಸುದೇವ ರಾವ್, ಉದಯ ಹೆಗ್ಡೆ, ಯೋಗೀಶ್ ಶೇಟ್ ಕಾಪು, ಎ.ಕೆ. ಸುಲೆಮಾನ್, ನಾರಾಯಣ ಭಂಡಾರಿ, ಪಟ್ಲ ಅಣ್ಣಯ್ಯ ನಾಯಕ್, ಸತೀಶ್ ಭಟ್ ಮತ್ತಿತರರು ಇದ್ದರು.