ಸರ್ಪಂಗಳ ಸುಬ್ರಹ್ಮಣ್ಯ ಭಟ್ ಪ್ರಶಸ್ತಿ ಪ್ರದಾನ
ಉಡುಪಿ: ಪ್ರಸಂಗ ಪಠ್ಯ ಒಂದೇ ಆದರೂ ಕಲಾವಿದರ ಸಾಮರ್ಥ್ಯದಿಂದಾಗಿ ಕಲಾಭಿವ್ಯಕ್ತಿ ಭಿನ್ನವಾಗಿರುವುದರಿಂದ ಒಮ್ಮೆ ವೀಕ್ಷಿಸಿದ ಆಖ್ಯಾನವನ್ನೇ ಇನ್ನೊಮ್ಮೆ ವೀಕ್ಷಿಸಿದಾಗ ಪ್ರೇಕ್ಷಕನಿಗೆ ಅದು ಬೇರೆಯೇ ರಂಗಪ್ರಸ್ತುತಿಯಂತೆ ಕಾಣುವುದು ಯಕ್ಷಗಾನದ ವೈಶಿಷ್ಟ್ಯವಾಗಿದೆ. ಈ ಗುಣದಿಂದಲೇ ಯಕ್ಷಗಾನ ಶ್ರೇಷ್ಠ ಕಲೆಯೆಂದು ಮಾನ್ಯವಾಗಿದೆ ಎಂದು ಪರ್ಯಾಯ ಸೋದೆ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.
ಅವರು ಹಿರಿಯ ಯಕ್ಷಗಾನ ಕಲಾವಿದ ಸಂಪಾಜೆ ಶೀನಪ್ಪ ರೈಗಳಿಗೆ ಸರ್ಪಂಗಳ ಸುಬ್ರಹ್ಮಣ್ಯ ಪ್ರಶಸ್ತಿ ಪ್ರದಾನ ಮಾಡಿ, ಈಗಲೂ ಪಾರಂಪರಿಕ ಪ್ರಸಂಗಗಳು ಪ್ರೇಕ್ಷಕರಿಗೆ ಆಪ್ಯಾಯಮಾನವಾಗಿದೆ ಎಂದು ತಿಳಿಸಿದರು. ಪ್ರಶಸ್ತಿ ಸ್ವೀಕರಿಸಿದ ಸಂಪಾಜೆ ಶೀನಪ್ಪ ರೈ ಮಾತನಾಡಿ, ತನ್ನ 57 ವರ್ಷಗಳ ಕಲಾ ವ್ಯವಸಾಯದಿಂದ ತೃಪ್ತನಾಗಿದ್ದೇನೆ. ಪರ್ಯಾಯ ಶ್ರೀಗಳಿಂದ ಈ ಪ್ರಶಸ್ತಿ ಪಡೆದಿರುವುದು ನನ್ನ ಸ್ಮರಣೀಯ ಕ್ಷಣವಾಗಿದೆ ಎಂದು ಧನ್ಯತೆಯನ್ನು ವ್ಯಕ್ತಪಡಿಸಿದರು. ಮುರಲಿ ಕಡೆಕಾರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ನಾರಾಯಣ ಎಂ. ಹೆಗಡೆ ಪ್ರಶಸ್ತಿ ಪತ್ರ ವಾಚಿಸಿದರು. ಡಾ. ನರೇಂದ್ರ ಶೆಣೈ ಧನ್ಯವಾದ ಸಮರ್ಪಿಸಿದರು. ನಳಿನಿ ಸುಬ್ರಹ್ಮಣ್ಯ ಭಟ್, ಡಾ. ಶೈಲಜಾ, ಜೈದೀಪ್ ಹಾಗೂ ರಮ್ಯಲಕ್ಷ್ಮೀ ಉಪಸ್ಥಿತರಿದ್ದರು.