ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಪೋಲಿಯೊ ಪ್ಲಸ್, ಸದಸ್ಯತ್ವ ಅಭಿವೃದ್ಧಿ ಸಮಾವೇಶ

Vishwanath S
Updated On : 5 Aug 2013, 12:25 pm

ಉಡುಪಿ: ಪರ್ಕಳ ಪ್ರೌಢಶಾಲೆಯ ಸಭಾಭವನದಲ್ಲಿ ಪರ್ಕಳ ರೋಟರಿ ಕ್ಲಬ್ ವತಿಯಿಂದ ವಲಯ ಮಟ್ಟದ ಪೋಲಿಯೊ ಪ್ಲಸ್ ಹಾಗೂ ಸದಸ್ಯತ್ವ ಅಭಿವೃದ್ಧಿ ಸಮಾವೇಶ - 2013  ಕಾರ್ಯಕ್ರಮವು ರೋಟರಿ ಕ್ಲಬ್ ಅಧ್ಯಕ್ಷ ಎಸ್.ಎನ್. ನಾಯಕ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು. ಸಮಾವೇಶವನ್ನು 2015-16 ನೇ ಸಾಲಿನ ನಿಯೋಜಿತ ಗವರ್ನರ್ ಡಾ. ಭರತೇಶ್ ಕಾರ್ಕಳ ಉದ್ಘಾಟಿಸಿ, ಶುಭ ಹಾರೈಸಿದರು. ಮಣಿಪಾಲ ಸೋನಿಯಾ ಕ್ಲಿನಿಕ್ ಮಕ್ಕಳ ತಜ್ಞೆ ಹಾಗೂ ಜಿಲ್ಲಾ ಪೋಲಿಯೊ ಪ್ಲಸ್ ಮಾಜಿ ಸಭಾಪತಿ ಡಾ.ಎಚ್.ಜೆ. ಗೌರಿ, ಮೂಡುಬಿದಿರೆ ರೋಟರಿಯ ಮಾಜಿ ಅಧ್ಯಕ್ಷ ಹಾಗೂ ಸದಸ್ಯತ್ವ ಅಭಿವೃದ್ಧಿ ಸಮಿತಿಯ ಜಿಲ್ಲಾ ಸಭಾಪತಿ ಜಯರಾಮ ಕೋಟ್ಯಾನ್, ವಲಯ 2ರ ಪೋಲಿಯೊ ಪ್ಲಸ್ ಸಮನ್ವಯಾಧಿಕಾರಿ ಶಿವಕುಮಾರ್, ವಲಯ 2ರ ಸದಸ್ಯತ್ವ ಅಭಿವೃದ್ಧಿ ಸಮನ್ವಯಾಧಿಕಾರಿ ಜಿ. ಗೋಪಾಲ, ಪ್ರಕಾಶ ಶೆಟ್ಟಿ ಬ್ರಹ್ಮಾವರ, ಕೆ. ಸತ್ಯನಾರಾಯಣ ಉಡುಪ ಬಾರ್ಕೂರು ಹಾಗೂ ರಾಜಕುಮಾರ್ ಬಿ. ಶೆಟ್ಟಿ ಪೆರ್ಡೂರು ಇದ್ದರು. ಬಿ. ಅನಂತರಾಮ ಭಟ್ ಸ್ವಾಗತಿಸಿ, ಬಿ.ಎಚ್. ಸೆಟ್ಟಿಗಾರ್ ನಿರೂಪಿಸಿ, ಬಿ. ಅನಂತರಾಮ ಭಟ್ ವಂದಿಸಿದರು.
ಅಂತರ್ ಕಾಲೇಜು ಹಿಂದಿ ಪ್ರಬಂಧ ಸ್ಪರ್ಧೆ
ಉಡುಪಿ: ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ವತಿಯಿಂದ ಹಿಂದಿ ದಿನಾಚರಣೆಯ ಪ್ರಯುಕ್ತ ಪದವಿ ವಿದ್ಯಾರ್ಥಿಗಳಿಗಾಗಿ ಅಂತರ್ ಕಾಲೇಜು ಹಿಂದಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಭಾಷಾ ಕೀ ದೀವಾರ್ ಕೇ ಆರ್ ಪಾರ್ ಹಮ್‌ಸಬ್ ಭಾರತೀಯ ಹೈ ಎಂಬ ವಿಷಯದಡಿ ವಿದ್ಯಾರ್ಥಿಗಳು ಎ4 ಹಾಳೆಯಲ್ಲಿ 4 ಪುಟಗಳಿಗೆ ಮೀರದಂತೆ ಬರೆದಿರುವ ಪ್ರಬಂಧವನ್ನು ಪ್ರಾಂಶುಪಾಲರ ದೃಢೀಕರಣ ಪತ್ರದೊಂದಿಗೆ ಆ. 24ರೊಳಗಾಗಿ ಮುಖ್ಯಸ್ಥರು, ಹಿಂದಿ ವಿಭಾಗ, ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿ- 576101 ಇಲ್ಲಿಗೆ ಕಳುಹಿಸಿಕೊಡಬೇಕು. ಪ್ರತಿ ಕಾಲೇಜಿನಿಂದ ಒಬ್ಬ ವಿದ್ಯಾರ್ಥಿಗೆ ಮಾತ್ರ ಸ್ಪರ್ಧಿಸಲು ಅವಕಾಶ ಎಂಬುದಾಗಿ ತಿಳಿಸಲಾಗಿದೆ.
ಬೈಕ್ ಕಳವು ಆರೋಪಿ ಬಂಧನ
ಕುಂದಾಪುರ: ಭಟ್ಕಳದಿಂದ ಕಳವು ಮಾಡಿದ ಸ್ಕೂಟಿ ಹಾಗೂ ಕುಂದಾಪುರದ ಕೆ.ಎಸ್.ಆರ್.ಟಿ.ಯಿಂದ ಕಳವು ಮಾಡಿದ ಮೋಟಾರು ಬೈಕನ್ನು ವಶಪಡಿಸಿಕೊಂಡಿರುವ ಕುಂದಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ ಪ್ರಕರಣ ಶನಿವಾರ ನಡೆದಿದೆ. ಮಂಗಳೂರು ಶಾಂತಿ ನಗರ ನಿವಾಸಿ ಚಂದ್ರ ಅಲಿಯಾಸ್ ಚಂದ್ರಶೇಖರ ಪೂಜಾರಿ ಅಲಿಯಾಸ್ ರಮೇಶ ಪೂಜಾರಿ ಆರೋಪಿ. ಅಪರಾಧ ವಿಭಾಗ ಪಿ.ಎಸ್.ಐ. ರೇವತಿ ಕೇಸು ದಾಖಲಿಸಿಕೊಂಡಿದ್ದಾರೆ.  
ಆಟೋ ಚಾಲಕರಿಂದ ಶಾಸಕಗೆ ಮನವಿ
ಮಣಿಪಾಲ: ಮಣಿಪಾಲ ರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘದ ಸಮುದಾಯ ಭವನ ನಿರ್ಮಿಸಲು ಮಣಿಪಾಲ ಪರಿಸರದಲ್ಲಿ ಸೂಕ್ತ ಸ್ಥಳ ಒದಗಿಸುವಂತೆ ಸಂಘದ ಪದಾಧಿಕಾರಿಗಳು ಇತ್ತೀಚೆಗೆ ಶಾಸಕ ಪ್ರಮೋದ್ ಮಧ್ವರಾಜ್ ಅವರನ್ನು ಆಗ್ರಹಿಸಿ ಮನವಿ ಸಲ್ಲಿಸಿದರು.
ಮಣಿಪಾಲ ರಿಕ್ಷಾ ನಿಲ್ದಾಣಕ್ಕೆ ಭೇಟಿ ನೀಡಿದ ಶಾಸಕರಿಗೆ ಸಲ್ಲಿಸಲಾದ ಈ ಮನವಿಯಲ್ಲಿ, ಸಂಘದಲ್ಲಿ ಸುಮಾರು 850 ಮಂದಿ ಸದಸ್ಯರಿದ್ದು, ಹಲವು ಜನೋಪಯೋಗಿ ಕೆಲಸಗಳನ್ನು ಮಾಡಲಾಗುತ್ತಿದೆ. ಶಿಕ್ಷಣಕ್ಕೆ ಪ್ರೋತ್ಸಾಹ ಧನ, ನೆರೆ ಪರಿಹಾರಕ್ಕೆ ಸಹಾಯಧನ, ಮಣಿಪಾಲ ಬಬ್ಬುಸ್ವಾಮಿ ದೈವಸ್ಥಾನಕ್ಕೆ ಸಹಾಯ, ಅನಾರೋಗ್ಯ ಪೀಡಿತ ಸದಸ್ಯರು ಹಾಗೂ ಹೃದಯ ಸಂಬಂಧಿ ಕಾಯಿಲೆಗೆ ಒಳಗಾದ ಸಾರ್ವಜನಿಕರಿಗೆ ಧನ ಸಹಾಯವನ್ನು ಸಂಘದ ವತಿಯಿಂದ ನೀಡಲಾಗುತ್ತಿದೆ.
ಇದೀಗ ಸಂಘದ ಸದಸ್ಯರ ಉಪಯೋಗಕ್ಕೆ ಸಮುದಾಯ ಭವನವೊಂದನ್ನು ನಿರ್ಮಿಸಲು ಯೋಜಿಸಲಾಗಿದ್ದು, ನಿವೇಶನ ಒದಗಿಸುವಂತೆ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾಗಿರುವ ನಗರಸಭಾ ಸದಸ್ಯ ರಮೇಶ್ ಕಾಂಚನ್ ಹಿರಿಯಡ್ಕ, ಅಧ್ಯಕ್ಷ ವಿಜಯ್ ಪುತ್ರನ್ ಹಿರೇಬೆಟ್ಟು, ಉಪಾಧ್ಯಕ್ಷ ಭರತ ತಿಂಗಳಾಯ ಬೆಳ್ಳಂಪಳ್ಳಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಪ್ರಭು ಅಲೆವೂರು, ಸಹ ಕಾರ್ಯದರ್ಶಿ ಸುರೇಶ್ ಪಾಲನ್ ಪೆರಂಪಳ್ಳಿ, ಕೋಶಾಧಿಕಾರಿ ಸುರೇಶ್ ನಾಯ್ಕ್ ಅಲೆವೂರು, ಸಂಘಟನಾ ಕಾರ್ಯದರ್ಶಿ ಪುರುಷೋತ್ತಮ ಸುವರ್ಣ, ಕ್ರೀಡಾ ಕಾರ್ಯದರ್ಶಿ ದಿನೇಶ್ ನಾಯಕ್ ಆತ್ರಾಡಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಪರ್ಕಳ ಶಾಲೆಯಲ್ಲಿ ಆಟಿಡೊಂಜಿ ದಿನ
ಪರ್ಕಳ: ಇಲ್ಲಿನ ಪರ್ಕಳ ಪ್ರೌಢಶಾಲೆಯಲ್ಲಿ ರೋಟರಿ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಲಾದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಜಿಲ್ಲಾ ಸವಿತಾ ಸಮಾಜ ಅಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಎಸ್.ಎನ್. ನಾಯಕ್ ವಹಿಸಿದ್ದರು. ಕಾರ್ಯಕ್ರಮದ ಪ್ರಾಯೋಜಕರಾದ ರೋಟರಿ ಪರ್ಕಳದ ಸ್ಥಾಪಕ ಅಧ್ಯಕ್ಷ ಶ್ರೀನಿವಾಸ ನಾಯಕ್, ವಲಯ 2ರ ಸಹಾಯಕ ಗವರ್ನರ್ ಮಹೇಶ ಕುಮಾರ್ ಎಂ., ವಲಯ ಸೇನಾನಿ ರಾಜಕುಮಾರ್ ಬಿ. ಶೆಟ್ಟಿ ಪೆರ್ಡೂರು ಇದ್ದರು. ರೋಟರಿ ಸಂಘ ಸೇವಾ ನಿರ್ದೇಶಕ ಎ. ಗಣೇಶ್ ನಿರೂಪಿಸಿದರು. ಕಾರ್ಯದರ್ಶಿ ಬಿ. ಅನಂತರಾಮ ಭಟ್ ವಂದಿಸಿದರು.
ಮೀನುಗಾರಿಕಾ ದೋಣಿಗಳ
ಎಂಜಿನಿನ ಅಶ್ವಶಕ್ತಿ 250 ರಿಂದ 350ಕ್ಕೇರಿಕೆ: ಸಚಿವ ಜೈನ್
ಉಡುಪಿ: ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರ ದೋಣಿಗಳಿಗೆ 250 ಅಶ್ವಶಕ್ತಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಎಂಜಿನನ್ನು ಅಳವಡಿಸುವುದಕ್ಕೆ ಇದ್ದ ನಿಷೇಧವನ್ನು ರಾಜ್ಯ ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ರದ್ದುಗೊಳಿಸಿದ್ದಾರೆ.
ಮೀನುಗಾರಿಕಾ ಬೋಟುಗಳಿಗೆ ಹಿಂದಿನ ಸರ್ಕಾರ 250 ಅಶ್ವಶಕ್ತಿಗಿಂತ ಹೆಚ್ಚಿನ ಸಾಮರ್ಥ್ಯದ ಎಂಜಿನ್  ಅಳವಡಿಕೆಗೆ ನಿಷೇಧ ಹೇರಿತ್ತು.
ಇದನ್ನು ರದ್ದಗೊಳಿಸಲು ಮೀನುಗಾರರು ಮಾಡಿದ್ದ ಮನವಿಯಂತೆ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಸಚಿವ ಜೈನ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಹಿಂದಿನ ನಿಷೇಧವನ್ನು ರದ್ದುಗೊಳಿಸಿ ಗರಿಷ್ಠ 350 ಅಶ್ವಶಕ್ತಿ ಸಾಮರ್ಥ್ಯದವರೆಗೆ ಎಂಜಿನುಗಳನ್ನು ಬಳಸುವುದಕ್ಕೆ ಅವಕಾಶವಾಗುವಂತೆ ಆದೇಶ ಹೊರಡಿಸಿದ್ದಾರೆ ಎಂದು ಶಾಸಕರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  
ಸರ್ಕಾರಿ ನೌಕರರಿಗೆ ಕಂಪ್ಯೂಟರ್ ತರಬೇತಿ
ಉಡುಪಿ: ನಗರದ ಕಿಯೋನಿಕ್ಸ್ ಕಂಪ್ಯೂಟರ್ ಸೆಂಟರ್‌ನಲ್ಲಿ ಆರಂಭವಾದ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ತರಬೇತಿಗೆ ಸಂಸ್ಥೆಯ ಮಾಲೀಕ ವಾಲ್ಟರ್ ಡಿಸೋಜ ಚಾಲನೆ ನೀಡಿದರು.
ಸಂಸ್ಥೆಯ ಸಿಬ್ಬಂದಿ ನಾಗೇಶ್ ಶೆಟ್ಟಿಗಾರ್, ರಂಜಿತಾ, ಸುರೇಖಾ ಹಾಗೂ ಸರ್ಕಾರಿ ನೌಕರರಾದ ಕಸ್ತೂರಿ, ಅಮಿತಾ ಸುಪ್ರಿಯಾ, ಗಣೇಶ್ ಗೌಡ, ಜಾಯ್ಸಿ ಕುಮಾರಿ ತೌರೋ, ಎಚ್. ಸುಬ್ರಹ್ಮಣ್ಯ, ಕೆ. ಸುವರ್ಣಿ ಪೈ, ಕಮಲ ಗಣಪತಿ ಕೆಲ್ಸಿ, ಶಹನಾಜ್, ಕೆ. ದಿನೇಶ್ ಕಾಂಚನ್, ಉಮಾಕಾಂತ ಕೆ.ಎ, ಸುಜಾತ ಎಸ್, ಪ್ರವೀಣ್ ಇದ್ದರು.

ರೋಟರಿ ವತಿಯಿಂದ ಬುಡ್ನಾರು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ
ಉಡುಪಿ: ಲಾಭ ಗಳಿಸುವುದಷ್ಟೇ ವ್ಯಾವಹಾರಿಕ ಸಂಸ್ಥೆಗಳ ಗುರಿಯಾಗಿರಬಾರದು. ಲಾಭದ ಒಂದಂಶವನ್ನಾದರೂ ಸಮಾಜದ ದೀನ ದಲಿತರ ಸೇವೆಗೆ ಮೀಸಲಿಡಬೇಕು ಎಂದು ಉಡುಪಿ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಕೆ. ಸರಳಾಯ ಹೇಳಿದ್ದಾರೆ.
ಇಲ್ಲಿನ ರೋಟರಿ ಕ್ಲಬ್ ವತಿಯಿಂದ ಬುಡ್ನಾರು ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ರೋಟರಿ ಅಧ್ಯಕ್ಷ ಬಿ.ವಿ. ಲಕ್ಷ್ಮೀನಾರಾಯಣ್, ಶಾಲಾಭಿವೃದ್ಧಿ ಸಮಿತಿಯ ಶಂಕರ್ ಶೆಟ್ಟಿ, ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ರಾಧಿಕ ಲಕ್ಷ್ಮೀನಾರಾಯಣ, ಕಾರ್ಯದರ್ಶಿ ಶುಭಾ ಬಾಸ್ರಿ, ರೋಟರಿ ಕಾರ್ಯದರ್ಶಿ ಸುಬ್ರಹ್ಮಣ್ಯ ಬಾಸ್ರಿ ಇದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ರತ್ನ ಸ್ವಾಗತಿಸಿ, ನಿರೂಪಿಸಿದರು. ಶಾಲಾಭಿವೃದ್ಧಿ ಸಮಿತಿಯ ಜಯಕರ ಶೆಟ್ಟಿ ಇಂದ್ರಾಳಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement