ಕಟಪಾಡಿ: ದಂಪತಿ ಸಜೀವ ದಹನ
ಕ.ಪ್ರ.ವಾರ್ತೆ ಉಡುಪಿ ಆ. 6
ಪತಿ-ಪತ್ನಿ ಬೆಂಕಿಗೆ ಸಜೀವ ದಹನವಾದ ಘಟನೆ ಉಡುಪಿ ಜಿಲ್ಲೆಯ ಕಾಪು ಸಮೀಪದ ಮೂಡಬೆಟ್ಟು ಗ್ರಾಮದ ಕಂಬಳಕಟ್ಟದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಕಂಬಳಕಟ್ಟ ಕಟಪಾಡಿ ಬೀಡು ಮನೆಯ ವಿಜಯ ಶೆಟ್ಟಿ (48) ಮತ್ತು ಅವರ ಪತ್ನಿ ಚಂದ್ರಿಕಾ ಶೆಟ್ಟಿ (38) ಬೆಂಕಿಗೆ ಆಹುತಿಯಾದವರು. ಮಂಗಳವಾರ ಬೆಳಗ್ಗೆ 7 ಗಂಟೆಗೆ ಬೀಡು ಮನೆಗೆ (ಕಂಬಳ ನಡೆಸುವವರ ಮನೆಯಾಗಿದ್ದು, ಇದನ್ನು ಗುತ್ತಿನ ಮನೆ ಅಥವಾ ಬೀಡು ಮನೆ ಎನ್ನಲಾಗುವುದು) ತಾಗಿಕೊಂಡಿರುವ ದೇವರ ಕೋಣೆಯೊಳಗೆ ಬೆಂಕಿ ಹೊತ್ತಿಕೊಂಡು ಇಬ್ಬರೂ ಒಳಗೆ ಸಜೀವವಾಗಿ ದಹನವಾಗಿದ್ದಾರೆ. ಇಬ್ಬರ ದೇಹದ ಜೊತೆಗೆ ಕೋಣೆಯಲ್ಲಿದ್ದ ಎಲ್ಲ ವಸ್ತುಗಳೂ ಸುಟ್ಟು ಕರಕಲಾಗಿವೆ. ಬೆಂಕಿಯಿಂದ ಹೊರಹೊಮ್ಮಿದ ಭಾರಿ ಪ್ರಮಾಣದ ಹೊಗೆಯನ್ನು ನೋಡಿದರೆ, ಪೆಟ್ರೋಲ್ ಅಥವಾ ಸೀಮೆಎಣ್ಣೆ ಬಳಕೆಯೇ ಬೆಂಕಿ ಅನಾಹುತಕ್ಕೆ ಕಾರಣ ಎಂದೂ ಶಂಕೆ ವ್ಯಕ್ತಪಡಿಸಲಾಗಿದೆ.
ಆಕಸ್ಮಿಕ ಅಲ್ಲವೇ?: ಆಟಿ (ಆಷಾಢ ಮಾಸ) ತಿಂಗಳಾದ್ದರಿಂದ ದೇವರ ಕೋಣೆಯಲ್ಲಿ ಪೂಜೆಯಿರುವುದಿಲ್ಲ. ಆದರೂ ದಂಪತಿ ದೇವರ ಕೋಣೆ ಪ್ರವೇಶಿಸಿದ್ದಾರೆ. ಆದ್ದರಿಂದ ಈ ಘಟನೆ ಕೇವಲ ಆಕಸ್ಮಿಕವಲ್ಲ ಎಂದು ಹೇಳಲಾಗುತ್ತಿದೆ. ವಿಜಯ ಶೆಟ್ಟಿ ಅವರು ಪತ್ನಿ ಚಂದ್ರಿಕಾ ಶೆಟ್ಟಿ, ಅವರ ತಾಯಿ ಮತ್ತು ಮಗಳು ಜೋತ್ಸ್ನಾ ಜೊತೆಯಲ್ಲಿ ಬೀಡಿನ ಮನೆಯಲ್ಲಿ ವಾಸಿಸುತ್ತಿದ್ದರು. ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿದ್ದ ವಿಜಯ ಶೆಟ್ಟಿ, ಮಂಗಳವಾರ ಬೆಳಗ್ಗೆಯಷ್ಟೇ ಮನೆಗೆ ವಾಪಸಾಗಿದ್ದರು.
ದೇವರ ಕೋಣೆಯಿಂದ ಬೆಳಗ್ಗೆ 7 ಗಂಟೆಗೆ ಹೊಗೆ ಕಾಣಿಸಿದಾಗ ಅಕ್ಕಪಕ್ಕದ ಮನೆಯವರು ನೀರೆರಚಿ ಬೆಂಕಿ ನಂದಿಸುವುದಕ್ಕೆ ಪ್ರಯತ್ನಿಸಿದರು. ದೇವರ ಕೋಣೆಯಾಗಿದ್ದರಿಂದ ಒಳಗೆ ಯಾರೂ ಇರುವುದಿಲ್ಲ ಎಂದು ಭಾವಿಸಿ ಒಳಗೆ ಪ್ರವೇಶಿಸುವ ಸಾಹಸ ಮಾಡಿಲ್ಲ. ಇದಾದ ನಂತರ ಉಡುಪಿಯಿಂದ ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸುವಷ್ಟರಲ್ಲಿ ಬೆಂಕಿ ತೀವ್ರವಾಗಿ ಹರಡಿ, ದೇವರಕೋಣೆ ಸಂಪೂರ್ಣ ಸುಟ್ಟು ಹೋಯಿತು. ಬೆಂಕಿ ನಂದಿದಾಗಲೇ ಕೋಣೆ ಒಳಗೆ ಶೆಟ್ಟಿ ದಂಪತಿ ಬೆಂಕಿಗೆ ಆಹುತಿಯಾಗಿರುವ ವಿಷಯ ತಿಳಿಯಿತು.