ಗೋ ಕಳ್ಳರಿಗೆ ಕಠಿಣ ಶಿಕ್ಷೆ: ಸುನಿಲ್ ಕುಮಾರ್ ಆಗ್ರಹ
ಕಾರ್ಕಳ: ತಾಲೂಕು ಹಾಗೂ ಉಡುಪಿ ಜಿಲ್ಲೆಯಲ್ಲಿ ಜಾನುವಾರು ಕದ್ದು ಕಸಾಯಿಖಾನೆ ಸಾಗಿಸುವ ಘಟನೆಗಳು ನಡೆಯುತ್ತಲೇ ಇದ್ದು, ಇಂತಹ ಕೃತ್ಯ ಎಸಗುವ ಆರೋಪಿಗಳಿಗೆ ಪೊಲೀಸ್ ಇಲಾಖೆ ಕೂಡಲೇ ಕಠಿಣ ಶಿಕ್ಷೆ ನೀಡಬೇಕು ಎಂದು ಶಾಸಕ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹೈನುಗಾರಿಕೆ ಮಾಡುತ್ತಿರುವವರ ಹಟ್ಟಿಗೆ ಅಕ್ರಮವಾಗಿ ಪ್ರವೇಶಿಸಿ ಜಾನುವಾರುಗಳ ಕಾಲು ಕಟ್ಟಿ ವಾಹನದಲ್ಲಿ ಹಿಂಸಾತ್ಮಕವಾಗಿ ತುಂಬಿಸಿ ಮಾಂಸಕ್ಕಾಗಿ ಮಾರಾಟ ಮಾಡುತ್ತಿರುವವರು ಕಳೆದ ಹಲವು ವರ್ಷಗಳಿಂದ ನಡೆಯುತ್ತ ಬಂದಿದೆ. ಇವರ ಹಾವಳಿಯಿಂದ ಹೈನುಗಾರಿಕೆ ಕುಟುಂಬವು ಜೀವನ ಸಾಗಿಸಲು ಅಸಾಧ್ಯವಾಗಿ ಬೀದಿಗೆ ಬೀಳುವಂತವಾಗಿದೆ. ಇಂತಹ ಪ್ರಕರಣದಲ್ಲಿ ಬಂಧಿತರಾಗುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಗೃಹ ಸಚಿವರಿಗೆ ಮನವಿ ಸಲ್ಲಿಸಿ ಆಗ್ರಹಿಸುವುದಾಗಿ ತಿಳಿಸಿದ್ದಾರೆ.
ಗೋ ಕಳವು; ವಿಹಿಂಪ ಖಂಡನೆ
ಉಡುಪಿ: ಸುರತ್ಕಲ್ನಲ್ಲಿ ಇತ್ತೀಚೆಗೆ ಮನೆಮಂದಿ ಎದುರೇ ಆಯುಧ ತೋರಿಸಿ ಗೋಕಳ್ಳತನ ಮಾಡುವಂತಹ ನೀಚಕೃತ್ಯಕ್ಕೆ ದುಷ್ಕರ್ಮಿಗಳು ಇಳಿದಿದ್ದಾರೆ. ದೇಶದಲ್ಲಿ ಗೋಹತ್ಯೆ ನಿಷೇಧ ಕಾನೂನು ಇದ್ದರೂ ಮತಬ್ಯಾಂಕ್ಗಾಗಿ ಅದನ್ನು ಪಾಲಿಸದೆ ಕಾಂಗ್ರೆಸ್ ನಿರ್ಲಕ್ಷ್ಯ ವಹಿಸಿದ ಪರಿಣಾಮ ಇಂದು ಪೂಜ್ಯ ಗೋವಿನ ಹತ್ಯೆ ನಿರಂತರ ನಡೆಯುತ್ತಿದೆ ಎಂದು ಪಡುಬೆಳ್ಳೆ ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ. ಬಿಜೆಪಿ ಸರ್ಕಾರವಿದ್ದಾಗ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯಿದೆ ಬಲಪಡಿಸಲು ಯತ್ನಿಸಿದರೆ ರಾಜ್ಯಪಾಲರು ಆ ಮಸೂದೆಯನ್ನು ಅಂಗೀಕಾರ ನೀಡಲಿಲ್ಲ. ಇದೀಗ ಕಾಂಗ್ರೆಸ್ ಆಡಳಿತಕ್ಕೆ ಬಂದ ಕೆಲವೇ ದಿನಗಳಲ್ಲಿ ರಾಜಾರೋಷವಾಗಿ ಗೋ ಅಪಹರಣ- ಹತ್ಯೆ ಇಮ್ಮಡಿಗೊಂಡಿದೆ. ಇನ್ನಾದರೂ ಕಣ್ಣಿದ್ದೂ ಕುರುಡನಂತೆ ಮಾಡದೆ ಗೋಹತ್ಯೆ ನಿಷೇಧ ಕಾನೂನು ಶೀಘ್ರ ಜಾರಿಗೊಳಿಸಬೇಕು, ತಪ್ಪಿಸ್ಥರನ್ನು ಶೀಘ್ರ ಬಂಧಿಸಿ ಕಠಿಣ ಕಾನೂನು ಕ್ರಮ ಜಾರಿಗೊಳಿಸಬೇಕೆಂದು ಪಡುಬೆಳ್ಳೆ ವಿ.ಹಿಂ.ಪ. ಸ್ಥಾಪಕ ಅಧ್ಯಕ್ಷ ಬೆಳ್ಳೆ ದೊಡ್ಡಮನೆ ಅಜೀತ್ ಶೆಟ್ಟಿ, ಅಧ್ಯಕ್ಷ ನಡಿಮನೆ ವಿಶ್ವನಾಥ ಶೆಟ್ಟಿ, ಪದಾಧಿಕಾರಿಗಳಾದ ಮಧ್ವರಾಜ್ ಭಟ್, ಶ್ರೀಶ ಕುಮಾರ್, ಶಂಕರಾಚಾರ್ಯ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.