ವಿವಿಧ ಬೇಡಿಕೆ ಈಡೇರಿಕೆಗೆ ಶಾಸಕ ಸುನಿಲ್ಗೆ ಮನವಿ
ಕಾರ್ಕಳ: ಅಜೆಕಾರು ಹೋಬಳಿ ವ್ಯಾಪ್ತಿಯ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಇತ್ತೀಚೆಗೆ ಶಾಸಕ ವಿ. ಸುನಿಲ್ ಕುಮಾರ್ ಅವರಿಗೆ ಮನವಿ ನೀಡಿದ್ದಾರೆ.
ಅಜೆಕಾರು ಮೆಸ್ಕಾಂ ಕಚೇರಿಯಲ್ಲಿ ಕಾಯಂ ವಿದ್ಯುತ್ ಬಿಲ್ ಸ್ವೀಕೃತಿ ಕೇಂದ್ರ ಸ್ಥಾಪಿಸಬೇಕು, ಹೆಬ್ರಿ ವಲಯದಿಂದ ಅಜೆಕಾರು ಫೀಡರ್ ವ್ಯಾಪ್ತಿಯನ್ನು ಕೈಬಿಟ್ಟಿ ಅಜೆಕಾರಿಗೆ ಪ್ರತ್ಯೇಕ ಉಪಕೇಂದ್ರ ಸ್ಥಾಪನೆ, ಸರ್ವೇ ಅಧಿಕಾರವನ್ನು ಆಯಾ ಗ್ರಾಮಗಳ ಗ್ರಾಮ ಲೆಕ್ಕಿಗರಿಗೆ ನೀಡುವುದು, ಕಾಡುಪ್ರಾಣಿಗಳಿಂದಬೆಳೆ ರಕ್ಷಿಸಲು ಮೀಸಲು ಅರಣ್ಯದೊಳಗಿನಿಂದ ಒಂದು ಮೀಟರ್ ಆಳ ಹಾಗೂ ಎತ್ತರದ ಕಂದಕವನ್ನು ರಚಿಸಬೇಕೆಂಬ ಹಲವು ಬೇಡಿಕೆಗಳ ಕುರಿತ ಮನವಿಯನ್ನು ಅಜೆಕಾರಿನ ರಾಮಮಂದಿರದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಶಾಸಕಗೆ ಸಲ್ಲಿಸಿದರು. ಪಡಿತರ ಚೀಟಿ ಸಮಸ್ಯೆ ನಿವಾರಿಸಲು ಅಧಿಕಾರಿಗಳೇ ಪ್ರತಿ ಮನೆಗೆ ತೆರಳಿ ಸಮೀಕ್ಷೆ ಮಾಡಿ ಕಾರ್ಡ್ ನೀಡುವಂತಾಗಬೇಕು ಎಂದು ಹೇಳಿದರು.
ಪ್ರಾಕೃತಿಕ ವಿಕೋಪದಿಂದ ನಷ್ಟವಾದ ಬೆಳೆಗಳಿಗೆ ನ್ಯಾಯ ಸಮ್ಮತ ಪರಿಹಾರ ಒದಗಿಸುವುದರೊಂದಿಗೆ ಕೃಷಿ ಹಾಗೂ ತೋಟಗಾರಿಕಾ ಇಲಾಖೆಯಿಂದ ಸಿಗುವ ಸವಲತ್ತು ಹಾಗೂ ಸಹಾಯಧನವನ್ನು ನೇರವಾಗಿ ಅರ್ಹ ಫಲಾನುಭವಿಗಳಿಗೆ ಸಿಗುವಂತಾಗಬೇಕು ಎಂದು ಆಗ್ರಹಿಸಲಾಯಿತು.
ಜಿ.ಪಂ. ಸದಸ್ಯೆ ಮಮತಾ ಅಧಿಕಾರಿ, ಉಡುಪಿ ಜಿಲ್ಲಾ ಭಾ.ಕಿ.ಸಂ. ಅಧ್ಯಕ್ಷ ಬಿ.ವಿ. ಪೂಜಾರಿ, ಅಜೆಕಾರು ಭಾಕಿ.ಸಂ. ಅಧ್ಯಕ್ಷ ನಡಿಮಾರು ಹರಿಶ್ಚಂದ್ರ ಹೆಗ್ಡೆ, ಕಾರ್ಕಳ ಭಾ.ಕಿ.ಸಂ. ಕಾರ್ಯದರ್ಶಿ ಗೋವಿಂದರಾಜ್ ಭಟ್ ಇದ್ದರು.