ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಡೀಮ್ಡ್ ಫಾರೆಸ್ಟ್ ಸರಳೀಕರಣಕ್ಕೆ ಕ್ರಮ: ರೈ

Vishwanath S
Updated On : 8 Aug 2013, 11:50 am

ಕುಂದಾಪುರ: ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ಕೃಷಿಕರಿಗೆ ಬಹಳಷ್ಟು ಸಮಸ್ಯೆಗಳಾಗುತ್ತಿರುವುದರಿಂದ ಮತ್ತು ಈ ಹಿಂದೆ ಅವೈಜ್ಞಾನಿಕವಾಗಿ ಡೀಮ್ಡ್ ಫಾರೆಸ್ಟ್‌ಗೆ ಸೇರಿಸಿರುವುದರಿಂದ ಸಮಸ್ಯೆ ಪರಿಹಾರಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದರು.
ಅವರು ಬುಧವಾರ ಕುಂದಾಪುರದ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
 ಡೀಮ್ಡ್ ಫಾರೆಸ್ಟ್ ಸಮಸ್ಯೆಗೆ ಕ್ಯಾಬಿನೆಟ್ ಕಮಿಟಿ ನೇಮಕ ಮಾಡಲಾಗುವುದು. ಸಮಸ್ಯೆ ಪರಿಹಾರಕ್ಕಾಗಿ ಈಗಾಗಲೇ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಮಾತುಕತೆ ನಡೆಸಿದೆ. ಮುಂದಿನ ದಿನಗಳಲ್ಲಿ ಅರಣ್ಯ, ಕಂದಾಯ ಹಾಗೂ ಕಾನೂನು ಇಲಾಖೆಗಳ ಜೊತೆಗೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ಕೆಲವು ಕಡೆ ಪಟ್ಟಾ ಜಾಗದಲ್ಲಿ ಭೂಮಿ ಹಾಗೂ ಅರಣ್ಯ ಎರಡೂ ಇದೆ. ಅಲ್ಲಿ ಅವುಗಳನ್ನು ವಿಂಗಡಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದವರು ಸ್ಪಷ್ಟಪಡಿಸಿದರು.
ಪ್ರತೀ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಹೆಕ್ಟೇರ್ ಜಾಗವನ್ನು ಸಾರ್ವಜನಿಕ ಉಪಯೋಗಕ್ಕಾಗಿ ಕಾದಿರಿಸುವ ಹಕ್ಕು ಇದೆ. ಅದಕ್ಕೆ ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಬೇಕಾಗುತ್ತದೆ ಎಂದರು.
ಅರಣ್ಯ ಗಡಿಯಲ್ಲಿ ಅನಾದಿ ಕಾಲದಿಂದ ವಾಸಿಸುತ್ತಿರುವ ಕುಟುಂಬಗಳ ಸಮಸ್ಯೆಗಳ ಬಗ್ಗೆ ಗಮನ ಸೆಳೆದಾಗ, ಗಿರಿಜನರಿಗಾಗಿ ಅರಣ್ಯ ಹಕ್ಕು ಕಾಯ್ದೆ ಇದ್ದು, ಹಕ್ಕು ಪತ್ರ ನೀಡಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಈಗಾಗಲೇ 518 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ ಎಂದು ತಿಳಿಸಿದರು.
ಆನೆ ಹೋದದ್ದೇ ದಾರಿ....: ಆನೆ ಕಾರಿಡಾರ್ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಆನೆ ಹೋದಲ್ಲೇ ದಾರಿ ಎನ್ನುವ ಗಾದೆಯಿದೆ. ಹಾಗಾಗಿ ಅದಕ್ಕೆ ಪ್ರತ್ಯೇಕ ಕಾರಿಡಾರ್ ಮಾಡಿದರೆ ಏನಾದರೂ ಪ್ರಯೋಜನವಾದೀತೆ ಎನ್ನುವ ಪ್ರಶ್ನೆಯೂ ನಮ್ಮ ಮುಂದೆ ಇದೆ. ನೀರು ಒಸರುವ ಜಾಗಗಳಲ್ಲಿ ಹೂಳೆತ್ತಿ ಆನೆಗಳಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಯೋಚಿಸಲಾಗುತ್ತಿದೆ ಎಂದು ತಿಳಿಸಿದರು.
ಮುದೂರಿನಂತಹಾ ಗ್ರಾಮಿಣ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕಕ್ಕೆ ಅಭಯಾರಣ್ಯದ ಸಮಸ್ಯೆಗಳು ಕಾಡುತ್ತಿದ್ದು, ಈ ಬಗ್ಗೆ ಎರಡೂ ಇಲಾಖೆಗಳು ಚರ್ಚಿಸಿ ಅಂಡರ್ ಗ್ರೌಂಡ್ ಸಂಪರ್ಕದ ಬಗ್ಗೆ ಮಾತುಕತೆ ನಡೆದು ಮೇಲಧಿಕಾರಿಗಳಿಗೆ ವರದಿ ಕಳುಹಿಸಲಾಗಿದೆ. ಇದಕ್ಕೆ ಹೆಚ್ಚು ಖರ್ಚು ತಗಲುವುದರಿಂದ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ ಎಂದರು. ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಾಧಿಕಾರಿ ಎ.ಕೆ. ಸಿಂಗ್, ಮಂಗಳೂರು ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಶಾಂತಪ್ಪ, ಉಪವಿಭಾಗಾಧಿಕಾರಿ ಯೋಗೇಶ್ವರ್, ಎಸಿಎಫ್ ಮಂಜುನಾಥ ಶೆಟ್ಟಿ ಹಾಗೂ ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement