ಪಠ್ಯದಲ್ಲಿ ಝಾನ್ಸಿ ರಾಣಿಗೆ ಅವಮಾನ: ಪ್ರತಿಭಟನೆ
ಉಡುಪಿ: ಆಂಧ್ರಪ್ರದೇಶದ ಸಿಕಂದರಾಬಾದಿನಲ್ಲಿ ಮೆಟ್ರೋ ರೈಲು ಯೋಜನೆಗಾಗಿ ಇಸ್ಕಾನ್‌ನ ಶ್ರೀಕೃಷ್ಣ ದೇವಸ್ಥಾನದ ಸಹಿತ 200 ವರ್ಷಗಳ ಹಿಂದಿನ ಗಣೇಶ, ದತ್ತಾತ್ರೇಯ, ಹನುಮಂತ, ನವಗ್ರಹಗಳು ಮತ್ತು ಕಾಳಿಮಾತೆ ಮುಂತಾದ ದೇವತೆಗಳ ದೇವಸ್ಥಾನ ಸ್ವಾಧೀನಪಡಿಸುವುದರ ವಿರುದ್ಧ ಸಿಬಿಎಸ್‌ಇ ಪಠ್ಯದಲ್ಲಿ ಝಾನ್ಸಿರಾಣಿ ಲಕ್ಷೀಬಾಯಿ ಹುಕ್ಕ ಸೇದುವಂತೆ ಚಿತ್ರಿಸಿ ಅವಮಾನಿಸಿರುವುದು ಹಾಗೂ ಪಠ್ಯಕ್ರಮದಲ್ಲಿ ರಾಜಕಾರಣಿ ರಾಹುಲ್ ಗಾಂಧಿಯನ್ನು ವೈಭವೀಕರಿಸಿರುವುದನ್ನು ವಿರೋಧಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ನಗರದ ಸರ್ವಿಸ್ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸನಾತನ ಸಂಸ್ಥೆ, ಇಸ್ಕಾನ್ ಮತ್ತು ಇತರ ಹಿಂದೂ ಸಂಘಟನೆಯ ಸದಸ್ಯರೂ ಭಾಗವಹಿಸಿದ್ದರು. ಹಿಂ.ಜ.ಜ. ಸಮಿತಿ ವಕ್ತಾರ ವಿಜಯ ಕುಮಾರ್, ಸರ್ಕಾರದ ಕಣ್ಣು ಹಿಂದೂ ದೇವಸ್ಥಾನಗಳ ಮೇಲೆ ಬಿದ್ದಿದೆ. ದೇವಸ್ಥಾನಗಳ ಸರ್ಕಾರೀಕರಣಗೊಳಿಸಿ ಭಕ್ತರು ಭಕ್ತಿಯಿಂದ ಅರ್ಪಿಸಿದ ಹಣವನ್ನು ರಾಜಕಾರಣಿಗಳು ಲೂಟಿಗೈದು ಅದನ್ನು ಮಜಾಮಾಡುವುದಕ್ಕೆ, ಅಲ್ಪಸಂಖ್ಯಾತರಿಗೆ ಸವಲತ್ತು ನೀಡಿ ಅವರ ಓಲೈಕೆ ಮಾಡುವ ಪ್ರಯತ್ನ ಮಾಡುತ್ತಿದೆ ಎಂದರು. ಇಸ್ಕಾನ್‌ನ ಗೋವಿಂದದಾಸ್, ಹಿಂದುತ್ವವಾದಿ ವಕೀಲ ದಿನೇಶ ನಾಯ್ಕ್, ಸನಾತನ ಸಂಸ್ಥೆಯ ಶೋಭಾ ಕಾಮತ್ ಮಾತನಾಡಿದರು. ರಮೇಶ ಪೆಲತ್ತೂರು ನಿರೂಪಿಸಿದರು.