ಅನ್ನಭಾಗ್ಯದಡಿ ರಾಗಿ, ಗೋದಿ ವಿತರಣೆ
ಉಡುಪಿ: ರಾಜ್ಯದಲ್ಲಿ 1ಕ್ಕೆ ಕೆ.ಜಿ. ಅಕ್ಕಿ ಒದಗಿಸುವ ಅನ್ನಭಾಗ್ಯ ಯೋಜನೆಯಲ್ಲಿ ಬಹುಧಾನ್ಯಗಳನ್ನು ವಿತರಿಸಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ಜೋಳ ಖರೀದಿಗೆ ತಿರ್ಮಾನಿಸಲಾಗಿದ್ದು, ಸ್ಥಳೀಯ ಬೇಡಿಕೆ ಆಧಾರದಲ್ಲಿ ರಾಗಿ, ಗೋದಿ ಹಾಗೂ ಕುಚ್ಚಿಲು ಅಕ್ಕಿ ಒದಗಿಸಲಾಗುವುದು ಎಂದು ಆಹಾರ, ನಾಗರಿಕ ಪೂರೈಕಾ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕರಾವಳಿ ಜಿಲ್ಲೆಗಳಲ್ಲಿ ಕುಚ್ಚಿಲು ಅಕ್ಕಿ ಬಳಕೆ ಆಹಾರ ಪದ್ಧತಿಯಾಗಿದೆ. ಇಲ್ಲಿನ ಜನರ ಬೇಡಿಕೆಗೆ ಅನುಸಾರವಾಗಿ ಕುಚ್ಚಿಲು ಅಕ್ಕಿಯನ್ನು, ಉ. ಕರ್ನಾಟಕ ಭಾಗದ ಜನರ ಬೇಡಿಕೆಗೆ ಅನುಗುಣವಾಗಿ ಜೋಳ ಹಾಗೂ ಗೋದಿಯನ್ನು, ಮಂಡ್ಯ ಮತ್ತು ಮೈಸೂರು ಭಾಗಗಳಿಗೆ ರಾಗಿಯನ್ನು ಪಡಿತರವಾಗಿ ಪೂರೈಸಲು ಸರ್ಕಾರ ತೀರ್ಮಾನಿಸಿದೆ ಎಂದರು. ಉಡುಪಿ ಜಿಲ್ಲೆಯಲ್ಲಿ ಬಿಪಿಎಲ್ ಪಡಿತರ ಚೀಟಿಗಾಗಿ 16399 ಅರ್ಜಿಗಳು ಬಂದಿವೆ. ಅದರಲ್ಲಿ 1398 ವಿತರಣೆಗೆ ಸಿದ್ಧವಾಗಿದ್ದು, 4218 ಕಾರ್ಡ್ಗನ್ನು ಈಗಾಗಲೇ ವಿತರಿಸಲಾಗಿದೆ ಎಂದರು. ಬಯೋವುಟ್ರಿಕ್ ವ್ಯವಸ್ಥೆಯನ್ನು ಈಗಾಗಾಲೇ ತುಮಕೂರು ಹಾಗೂ ಚಿಕ್ಕಮಗಳೂರಿನಲ್ಲಿ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮೈಸೂರು, ಬೆಳಗಾವಿ, ಉಡುಪಿ, ಗುಲ್ಬರ್ಗ, ಹುಬ್ಬಳ್ಳಿ- ಧಾರವಾಡ ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗುವುದು ಎಂದರು.