ಅನ್ನಭಾಗ್ಯದಡಿ ಸ್ಥಳೀಯ ಬೇಡಿಕೆಯಂತೆ ರಾಗಿ, ಗೋಧಿ, ಕುಚ್ಚಿಲು ಅಕ್ಕಿ ವಿತರಣೆ: ಗುಂಡೂರಾವ್
ಉಡುಪಿ: ರಾಜ್ಯದಲ್ಲಿ ರು. 1ಕ್ಕೆ ಅಕ್ಕಿ ಒದಗಿಸುವ ಅನ್ನಭಾಗ್ಯ ಯೋಜನೆಯಲ್ಲಿ ಬಹುಧಾನ್ಯಗಳನ್ನು ವಿತರಿಸಲು ಸರ್ಕಾರ ಬದ್ಧವಾಗಿದೆ. ಈಗಾಗಲೇ ಜೋಳ ಖರೀದಿಗೆ ತಿರ್ಮಾನಿಸಲಾಗಿದ್ದು, ಸ್ಥಳೀಯ ಬೇಡಿಕೆ ಆಧಾರದಲ್ಲಿ ರಾಗಿ, ಗೋಧಿ ಹಾಗೂ ಕುಚ್ಚಿಲು ಅಕ್ಕಿ ಒದಗಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿ ಜಿಲ್ಲೆಗಳಲ್ಲಿ ಕುಚ್ಚಿಲು ಅಕ್ಕಿ ಬಳಕೆ ಆಹಾರ ಪದ್ಧತಿಯಾಗಿದೆ. ಇಲ್ಲಿನ ಜನರ ಬೇಡಿಕೆಗೆ ಅನುಸಾರವಾಗಿ ಕುಚ್ಚಿಲು ಅಕ್ಕಿಯನ್ನು, ಉ. ಕರ್ನಾಟಕ ಭಾಗದ ಜನರ ಬೇಡಿಕೆಗೆ ಅನುಗುಣವಾಗಿ ಜೋಳ ಹಾಗೂ ಗೋಧಿಯನ್ನು, ಮಂಡ್ಯ ಮತ್ತು ಮೈಸೂರು ಭಾಗಗಳಿಗೆ ರಾಗಿಯನ್ನು ಪಡಿತರವಾಗಿ ಸರಬರಾಜು ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದರು.
98 ಲಕ್ಷ ಕುಟುಂಬಕ್ಕೆ ಪ್ರಯೋಜನ: ಅನ್ನಭಾಗ್ಯ ಯೋಜನೆಯಲ್ಲಿ ಇದುವರೆಗೂ 98 ಲಕ್ಷ ಕುಟುಂಬಗಳು ಇದರ ಪ್ರಯೋಜನ ಪಡೆದುಕೊಂಡಿವೆ. ಉಡುಪಿ ಜಿಲ್ಲೆಯಲ್ಲಿ ಬಿಪಿಎಲ್ ಪಡಿತರ ಚೀಟಿಗಾಗಿ 16399 ಅರ್ಜಿಗಳು ಬಂದಿವೆ. ಅದರಲ್ಲಿ 1398 ವಿತರಣೆಗೆ ಸಿದ್ಧವಾಗಿದ್ದು, 4218 ಕಾರ್ಡ್ಗನ್ನು ಈಗಾಗಲೇ ವಿತರಿಸಲಾಗಿದೆ ಎಂದು ಅವರು ಹೇಳಿದರು.
ಪಡಿತರ ಸೋರಿಕೆ ತಡೆಗೆ ಬಯೋವುಟ್ರಿಕ್: ಆಹಾರ ಧಾನ್ಯಗಳ ವಿತರಣೆ ವ್ಯವಸ್ಥೆಯಲ್ಲಿ ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಬಯೋವುಟ್ರಿಕ್ ವ್ಯವಸ್ಥೆಯನ್ನು ಈಗಾಗಾಲೇ ತುಮಕೂರು ಹಾಗೂ ಚಿಕ್ಕಮಗಳೂರಿನಲ್ಲಿ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮೈಸೂರು, ಬೆಳಗಾವಿ, ಉಡುಪಿ, ಗುಲ್ಬರ್ಗ, ಹುಬ್ಬಳ್ಳಿ- ಧಾರವಾಡ ಜಿಲ್ಲೆಗಳಲ್ಲಿ ಶೀಘ್ರವೇ ಪ್ರಾರಂಭಿಸುವುದಾಗಿ ಭರವಸೆ ನೀಡಿದರು.
ಆಹಾರ ಧಾನ್ಯಗಳನ್ನು ವಾಹನಗಳಿಗೆ ಹೇರುವ ಮತ್ತು ಇಳಿಸುವ ಹಮಾಲಿಗಳಿಗೆ ಪ್ರತಿ ಮೂಟೆಯೊಂದಕ್ಕೆ ಕೇವಲ ರು. 6 ನೀಡುತ್ತಿದ್ದು ಇದನ್ನು ಪರಿಷ್ಕರಿಸಿ ದುಡಿಯುವ ವರ್ಗಕ್ಕೆ ನ್ಯಾಯ ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದ ಅವರು, ಪಡಿತರ ಅಂಗಡಿಗಳಿಗೆ ಕಮಿಷನ್ ಹೆಚ್ಚಿಸುವ ಬಗ್ಗೆಯೂ ಸಿಎಂ ಅವರೊಂದಿಗೆ ಚರ್ಚಿಸಿದ್ದು ಅವರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಗುಂಡೂರಾವ್ ಮಾಹಿತಿ ನೀಡಿದರು.
ಈ ಹಿಂದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಡಿತರ ವ್ಯವಸ್ಥಯಡಿ ವಿತರಿಸಲಾಗುವ ಸೀಮೆಎಣ್ಣೆಗೆ ಪ್ರತ್ಯೇಕ ದರ ನಿಗದಿಯಾಗುತ್ತಿತ್ತು. ಈ ಗೊಂದಲ ನಿವಾರಿಸಲು ಈಗಾಗಲೇ ರಾಜ್ಯಾದ್ಯಂತ ಏಕರೂಪದ ದರ ನಿಗದಿಪಡಿಸಲಾಗಿದೆ. ಅದರಂತೆ ಪ್ರಸಕ್ತ ರಾಜ್ಯದೆಲ್ಲಡೆ 16.20ಗೆ 1 ಲೀ. ಸೀಮೆಎಣ್ಣೆ ವಿತರಿಸಲಾಗುತ್ತದೆ ಎಂದರು.
ಸೀಮೆಎಣ್ಣೆ ಮುಕ್ತ ಘೋಷಣೆ: ಸೀಮೆಎಣ್ಣೆ ಬಳಕೆ ಆರೋಗ್ಯಕ್ಕೆ ಹಾನಿಕಾರವಾಗಿರುವುದರಿಂದ ಅದರ ಬಳಕೆ ಕಡಿಮೆ ಮಾಡಲು ಇಲಾಖೆ ಚಿಂತನೆ ನಡೆಸಿದೆ. ಇದರ ಮೊದಲ ಹಂತವಾಗಿ ಬೆಂಗಳೂರು ನಗರ ಜಿಲ್ಲೆಯನ್ನು 'ಸೀಮೆಎಣ್ಣೆ ಮುಕ್ತ ಜಿಲ್ಲೆ'ಯೆಂದು ಘೋಷಿಸಲಾಗುವುದು ಎಂದು ಸಚಿವ ಹೇಳಿದರು.
ಅಪರ ಜಿಲ್ಲಾಧಿಕಾರಿ ಕುಮಾರ್, ಶಾಸಕ ಪ್ರಮೋದ್ ಮಧ್ವರಾಜ್, ವಾರ್ತಾಧಿಕಾರಿ ಖಾದರ್ ಷಾ ಇದ್ದರು.