ಅರಸು ದೂರದರ್ಶಿತ್ವ ಇಂದಿಗೂ ಆದರ್ಶ: ಶಾಸಕ ಪ್ರಮೋದ್
ಉಡುಪಿ: ಇವತ್ತು ಲಕ್ಷಾಂತರ ಮಂದಿ ಸ್ವಂತ ಭೂಮಿ ಹೊಂದಿದ್ದಾರೆ, ಭೂಮಾಲೀಕರ ಕೈಕೆಳಗೆ ದುಡಿಯುತ್ತಿದ್ದ ಗೇಣಿದಾರರು ಕೂಡ ಇಂದು ಭೂಮಾಲಕರಾಗಿದ್ದಾರೆ ಎಂದಾಗಿದ್ದರೆ ಅದರ ಹಿಂದೆ ದೇವರಾಜ್ ಅರಸರು ಜಾರಿಗೆ ತಂದ ಭೂಸುಧಾರಣಾ ಕಾಯ್ದೆಯ ದೂರದರ್ಶಿತ್ವ ಇದೆ. ಅವರ ಈ ದೂರದರ್ಶಿತ್ವ ಇಂದಿನ ತಲೆಮಾರಿಗೆ ಆದರ್ಶವಾಗಿದೆ ಎಂದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಮಂಗಳವಾರ ನಗರದ ಆದಿಉಡುಪಿಯ ಅಂಬೇಡ್ಕರ್ ಭವನದಲ್ಲಿ ದಿ.ದೇವರಾಜ್ ಅರಸು ಅವರ 98ನೇ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಿಕ್ಕ ಮಕ್ಕಳು ಅಂಗನವಾಡಿಗೆ ಹೋಗಿ ಅಕ್ಷರಾಭ್ಯಾಸ ಮಾಡುವ ಶಿಕ್ಷಣ ಕ್ಷೇತ್ರದ ತಳಹದಿಯ ವ್ಯವಸ್ಥೆಯನ್ನು ಕೂಡ ಅರಸು ಅವರೇ ಜಾರಿಗೆ ತಂದವರು. ಇಂದು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ, ಆದರೂ ಅರಸು ಅವರ ಕೊಡುಗೆಗಳನ್ನು ಮರೆಯುವಂತಿಲ್ಲ ಎಂದವರು ಹೇಳಿದರು.
ಅತಿಥಿಗಳಾಗಿ ಜಿಪಂ ಮು.ಕಾ.ನಿ. ಅಧಿಕಾರಿ ಎಸ್.ಎ. ಪ್ರಭಾಕರ ಶರ್ಮ, ತಾಪಂ ಅಧ್ಯಕ್ಷ ಗೌರಿ ಪೂಜಾರಿ, ಅಪರ ಜಿಲ್ಲಾಧಿಕಾರಿ ಕುಮಾರ್, ವಿಶೇಷ ಉಪನ್ಯಾಸಕರಾಗಿ ಶಿಕ್ಷಕ ರವೀಂದ್ರ ಪೂಜಾರಿ ಅಡ್ವೆ ಮತ್ತಿತರರು ಇದ್ದರು.