ಸಾಮೂಹಿಕ ಚೂಡಿಪೂಜೆ
ಹಿರಿಯಡ್ಕ: ಶ್ರಾವಣ ಮಾಸದ ಪ್ರತಿ ಶುಕ್ರವಾರ ಹಾಗೂ ಭಾನುವಾರ ತುಳಸಿ ಕಟ್ಟೆಗೆ ಚೂಡಿ (ಹೂವು- ಗರಿಕೆ) ಪೂಜೆಯ ಸಂಪ್ರದಾಯ ಪ್ರಚಲಿತವಿದೆ. ಅದರಂತೆ ಇಲ್ಲಿಗೆ ಸಮೀಪದ ದೊಂಡೇರಂಗಡಿಯ ಶ್ರೀರಾಮ ಮಂದಿರ ಮತ್ತು ಶ್ರೀರಾಮ ಭಜನಾ ಸೇವಾ ಸಂಘದ ಮಹಿಳಾ ವಿಭಾಗ ವತಿಯಿಂದ ಸಾಮೂಹಿಕ ಚೂಡಿ ಪೂಜೆ ಮಂಗಳವಾರ ನಡೆಯಿತು.
ಜಿಎಸ್ಬಿ ಸಮುದಾಯದ ಮುತ್ತೈದೆಯರು ಸೇರಿ ತುಳಸಿ ಕಟ್ಟೆಯ ಸನ್ನಿಧಾನದಲ್ಲಿ ತಾವು ತಯಾರಿಸಿ ತಂದಿದ್ದ ಚೂಡಿಯನ್ನು ದೇವರಿಗೆ ಅರ್ಪಿಸಿ ಸಾಮೂಹಿಕ ಪೂಜೆ ನೆರವೇರಿಸಿದರು. ನಂತರ ಹಿರಿಯ ಮುತ್ತೈದೆಯರಿಗೆ ಚೂಡಿಯನ್ನು ನೀಡಿ ಆಶೀರ್ವಚನ ಪಡೆದು, ನಂತರ ಸುಮಂಗಲಿಯರೆಲ್ಲರೂ ಚೂಡಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ಮಹಿಳಾ ಮಂಡಳಿ ಅಧ್ಯಕ್ಷೆ ಸೀತಾ ಬಾಯಿ ಆರ್. ನಾಯಕ್ ಮಾತನಾಡಿದರು. ಕಾರ್ಯದರ್ಶಿ ನಮಿತಾ ಎಸ್. ಕಿಣಿ ಇದ್ದರು.
ಶ್ರೀರಾಮ ದೇವರಿಗೆ ಮಹಾಪೂಜೆಯ ಬಳಿಕ ಎಲ್ಲರಿಗೂ ಪ್ರಸಾದ ವಿತರಣೆ ಮಾಡಲಾಯಿತು. ರಾಮ ಮಂದಿರದ ಆಡಳಿತ ಮೊಕ್ತೇಸರರಾದ ವೈಕುಂಠ ಕಿಣಿ, ಮೂಡಲಗಿರಿ ನಾಯಕ್, ರಾಘವೇಂದ್ರ ನಾಯಕ್, ಪ್ರಕಾಶ್ ಕಿಣಿ, ಜಯರಾಮ್ ನಾಯಕ್ ಇದ್ದರು.