ಆಚಾರ್ಯ ಮಧ್ವರ ಏಕಶಿಲಾ ವಿಗ್ರಹ ನಿರ್ಮಾಣಕ್ಕೆ ಬೃಹತ್ ಶಿಲೆ ಆಗಮನ
ಉಡುಪಿ: ಇಲ್ಲಿನ ಕುಂಜಾರುಗಿರಿಯಲ್ಲಿ ಸುಮಾರು 1.50 ಕೋಟಿ ವೆಚ್ಚದಲ್ಲಿ ಸ್ಥಾಪಿಲುದ್ದೇಶಿಸಿರುವ ದ್ವೈತ ಮತ ಸಂಸ್ಥಾಪಕ ಆಚಾರ್ಯ ಮಧ್ವರ 32 ಅಡಿ ಎತ್ತರದ ಏಕಶಿಲಾ ವಿಗ್ರಹ ನಿರ್ಮಾಣಕ್ಕೆ ಅಗತ್ಯವಿರುವ ಬೃಹತ್ ಗಾತ್ರದ ಶಿಲೆ ಬುಧವಾರ ಉಡುಪಿ ತಲುಪಿತು.
ಸುಮಾರು 8 ಶತಮಾನಗಳ ಹಿಂದೆ ಆಚಾರ್ಯ ಮಧ್ವರು ಹುಟ್ಟಿ ಬೆಳೆದ, ಪರಶುರಾಮ ಮತ್ತು ದುರ್ಗೆ ದೇವಾಲಯಗಳಿರುವ ಕುಂಜಾರುಗಿರಿಯ ತಪ್ಪಲಲ್ಲಿ ಈ ವಿಗ್ರಹವನ್ನು ಸ್ಥಾಪಿಸಲು ಉಡುಪಿಯ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ವರ್ಷದ ಹಿಂದೆ ಸಂಕಲ್ಪಿಸಿದ್ದರು. ಅದಕ್ಕೆ ಪೂರಕವಾಗಿ 8 ಅಡಿ ಎತ್ತರದ ಶಿಲಾ ಪೀಠ ಈಗಾಗಲೇ ನಿರ್ಮಾಣವಾಗಿದೆ.
ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರದಿಂದ ಜು.29ರಂದು ಹೊರಟಿದ್ದ ಸುಮಾರು 180 ಟನ್ ಭಾರದ ಭಾರಿ ಗಾತ್ರದ ಕಲ್ಲು 120 ಚಕ್ರಗಳ ಬೃಹತ್ ಟ್ರಾಲಿಯಲ್ಲಿ ಸುಮಾರು 22 ದಿನಗಳ ಕಾಲ ಪ್ರಯಾಣಿಸಿ ಉಡುಪಿಗೆ ಬುಧವಾರ ಆಗಮಿಸಿತು. ಮಾಜಿ ಶಾಸಕ ಕೆ. ರಘುಪತಿ ಭಟ್, ಪಲಿಮಾರು ಮಠದ ವ್ಯವಸ್ಥಾಪಕ ಬಲರಾಮ ಭಟ್ ನೇತೃತ್ವದಲ್ಲಿ ನೂರಾರು ಮಂದಿ ಭಕ್ತಾಭಿಮಾನಿಗಳು ರಾ.ಹೆ. 66ರ ಕರಾವಳಿ ಜಂಕ್ಷನ್‌ನಲ್ಲಿ ಶಿಲೆಯನ್ನು ಭವ್ಯವಾಗಿ ಸ್ವಾಗತಿಸಿದರು. ಇದಕ್ಕೂ ಮೊದಲು ಕುಂದಾಪುರ ತಾಲೂಕಿನ ಆನೆಗುಡ್ಡೆಯ ಶ್ರೀವಿನಾಯಕ ದೇವಾಲಯಕ್ಕೆ ತಲುಪಿದ ಈ ಶಿಲೆಗೆ ಅಲ್ಲಿ ಗಣಪತಿ ಪೂಜೆ ಸಲ್ಲಿಸಿದ ಬಳಿಕ ಉಡುಪಿಗೆ ತರಲಾಯಿತು. ಉಡುಪಿಯಲ್ಲಿ ಕರಾವಳಿ ಜಂಕ್ಷನ್‌ನಿಂದ ನೂರಾರು ವಾಹನಗಳ ಜಾಥಾ ಮೂಲಕ ಸುಭಾಷ್ ನಗರ ಎಂಬಲ್ಲಿಗೆ ಶಿಲೆಯನ್ನು ತರಲಾಯಿತು. ಅಲ್ಲಿಂದ ಬಿರುದಾವಳಿ, ವಾದ್ಯ ಘೋಷಗಳೊಂದಿಗೆ ಶಿಲೆಯನ್ನು ಕುಂಜಾರುಗಿರಿ ತಪ್ಪಲಿಗೆ ಶೋಭಾಯಾತ್ರೆಯಲ್ಲಿ ತರಲಾಯಿತು.
ಪಲಿಮಾರು ಮಠಾಧೀಶರು ಹೈದರಾಬಾದ್‌ನಲ್ಲಿ ಚಾತುರ್ಮಾಸ ವ್ರತದಲ್ಲಿರುವುದರಿಂದ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರು ಶಿಲೆಯನ್ನು ಬರಮಾಡಿಕೊಂಡು ಪೂಜೆ ಸಲ್ಲಿಸಿದರು.
ಆಚಾರ್ಯ ಮಧ್ವಾಚಾರ್ಯರೇ ತಮ್ಮ ತಂತ್ರಸಾರ ಗ್ರಂಥದಲ್ಲಿ ಹೇಳಿರುವಂತೆ ಪರಿಪೂರ್ಣ ವಿಗ್ರಹದಲ್ಲಿರಬೇಕಾದ 32 ಪ್ರತಿಮಾ ಲಕ್ಷಣಗಳನ್ನೊಳಗೊಂಡು ಈ ವಿಗ್ರಹ ರಚನೆಯಾಗಲಿದೆ. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿಲ್ಪಿ ರಾಮನಗರದ ಅಶೋಕ ಗುಡಿಗಾರ್ ಈ ವಿಗ್ರಹವನ್ನು ಕೆತ್ತಲಿದ್ದಾರೆ.