ಮೀನುಗಾರರಿಂದ ಸಮುದ್ರರಾಜಗೆ ಪೂಜೆ
ಮಲ್ಪೆ: ಕಡಲಿನಲ್ಲಿ ಮೀನುಗಾರಿಕಾ ಋತು ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಲ್ಪೆ ಸಮುದ್ರ ತೀರದಲ್ಲಿ ಮೀನುಗಾರರು ಬುಧವಾರ ಸಮುದ್ರ ರಾಜನಿಗೆ ಪೂಜೆ ಸಲ್ಲಿಸಿದರು.
ಪ್ರತಿ ವರ್ಷದಂತೆ ಮಳೆಗಾಲದಲ್ಲಿ ಆಳಸಮುದ್ರ ಮೀನುಗಾರಿಕೆ ನಿಷೇಧದ ನಂತರ ಇದೀಗ ಮತ್ತೆ ಮೀನುಗಾರಿಕೆ ಆರಂಭವಾಗಿದೆ. ಇದಕ್ಕೆ ಮೊದಲು ಮೀನುಗಾರರು ಸಮುದ್ರಕ್ಕೆ ಹಾಲೆರೆದು, ಉತ್ತಮ ಮೀನು ಸಿಗುವಂತೆ, ಮೀನುಗಾರರ ಆಸ್ತಿಪಾಸ್ತಿ, ಪ್ರಾಣಕ್ಕೆ ಯಾವುದೇ ತೊಂದರೆಯಾಗದಂತೆ ಅನುಗ್ರಹಿಸುವಂತೆ ಸಮುದ್ರ ರಾಜನಿಗೆ ಪೂಜೆ ಸಲ್ಲಿಸುತ್ತಾರೆ.
ಬುಧವಾರ ಮೀನುಗಾರರು ವಡಭಾಂಡೇಶ್ವರ ದೇವಾಲಯದಲ್ಲಿ ಗಣಹೋಮ ನೆರವೇರಿಸಿ, ಬೊಬ್ಬರ್ಯ ದೈವಕ್ಕೆ ಪೂಜೆ ಸಲ್ಲಿಸಿದರು. ಅಲ್ಲಿಂದ ಅಲ್ಲಿಂದ ಪ್ರಸಾದ ತೆಗೆದುಕೊಂಡು ವಾದ್ಯಘೋಷಗಳೊಂದಿಗೆ ಭಜನೆ ಮಾಡುತ್ತಾ ಮಲ್ಪೆ ಸಮುದ್ರ ತೀರಕ್ಕೆ ತೆರಳಿ ಸಮುದ್ರ ರಾಜನಿಗೆ ಸಮರ್ಪಿಸಿ, ಹಾಲು ಎರೆದು ಪೂಜೆ ಸಲ್ಲಿಸಿದರು. ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ರಘುಪತಿ ಭಟ್, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ಮೀನುಗಾರರ ನಾಯಕ ಹಿರಿಯಣ್ಣ ಕಿದಿಯೂರು, ಕೇಶವ ಕುಂದರ್, ಗೋಪಾಲ ಕುಂದರ್, ರಮೇಶ್ ಕೋಟ್ಯಾನ್, ರಾಮ ಕಾಂಚನ್ ಮುಂತಾದವರು ಇದ್ದರು.