ಸಿಟಿ ಬಸ್ ದರ ಏರಿಕೆ
ಉಡುಪಿ: ರಾಜ್ಯ ಸಾರಿಗೆ ಇಲಾಖೆ ಹೊರಡಿಸಿರುವ ಬಸ್ ಪ್ರಯಾಣ ಹೊಸ ದರಪಟ್ಟಿಯಂತೆ ಉಡುಪಿಯ ಸಿಟಿ ಬಸ್ಗಳಲ್ಲಿಯೂ ಗುರುವಾರದಿಂದ ಜಾರಿಗೆ ಬರುವಂತೆ ಪ್ರಯಾಣ ದರ ಏರಿಸಲಾಗಿದೆ.
ಕನಿಷ್ಠ ಪ್ರಯಾಣ ದರ ರು. 7 ಆಗಿದ್ದು, ಉಳಿದ ಸ್ಟೇಜ್ಗಳಿಗೆ ಶೇ.10ರಿಂದ 15ರವರೆಗೆ ಏರಿಕೆ ಮಾಡಲಾಗಿದೆ. ನಿತ್ಯ ಪ್ರಯಾಣಿಕರಿಗೆ ಹೊಸ ದರ ಪಟ್ಟಿಯಂತೆ ಶೇ.25 ಮತ್ತು ವಿದ್ಯಾರ್ಥಿಗಳಿಗೆ ಶೇ.40ರಂತೆ ರಿಯಾಯತಿ ಲಭ್ಯ ಇದೆ.
ಗುರುತು ಚೀಟಿ: ಇದುವರೆಗೆ ನಿತ್ಯ ಪ್ರಯಾಣಿಕರಿಗೆ ನೀಡಲಾಗುತ್ತಿದ್ದ ರಿಯಾಯತಿ ಕೂಪನ್ನಳನ್ನು ರದ್ದುಪಡಿಸಿ, ಅದರ ಬದಲಿಗೆ ಗುರುತುಚೀಟಿ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ರಿಯಾಯತಿ ಬಯಸುವ ನಿತ್ಯ ಪ್ರಯಾಣಿಕರು ಗುರುತುಚೀಟಿ ಪಡೆಯಲು ರು. 100 ಕೊಟ್ಟು ಅರ್ಜಿ ಸಲ್ಲಿಸಬೇಕು. ಆದರೆ ವಿದ್ಯಾರ್ಥಿಗಳಿಗೆ ಹಿಂದಿನಂತೆ ಕೂಪನ್ ವ್ಯವಸ್ಥೆ ಮುಂದುವರಿಯುತ್ತದೆ ಎಂದು ಉಡುಪಿ ಸಿಟಿ ಬಸ್ ಮಾಲೀಕರ ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.