ಇ- ಆಡಳಿತ: ಉಡುಪಿ ಜಿಲ್ಲೆ ರಾಜ್ಯಕ್ಕೆ ಪ್ರಥಮ
ಉಡುಪಿ: ಕರ್ನಾಟಕದಲ್ಲಿ ಇ- ಆಡಳಿತಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಇಲ್ಲಿನ 161 ಗ್ರಾ.ಪಂ.ಗಳಲ್ಲಿ 159 ಗ್ರಾ.ಪಂ.ಗಳು ಇಂಟರ್‌ನೆಟ್ ಸಂಪರ್ಕ ಪಡೆದಿದ್ದು, ಉಡುಪಿ ಜಿಲ್ಲಾಧಿಕಾರಿ ಕಚೇರಿಯು ಪೇಪರ್ ರಹಿತ ಕಚೇರಿಯಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಉಪೇಂದ್ರ ನಾಯಕ್ ಹೇಳಿದರು.
ಶಿರ್ವ ಸಂತ ಮೇರಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮತ್ತು ರಾಜ್ಯಶಾಸ್ತ್ರ ಪ್ರಾಧ್ಯಾಪಕರ ಸಂಘದ ಆಶ್ರಯದಲ್ಲಿ ನಡೆದ 'ಕರ್ನಾಟಕದಲ್ಲಿ ಇ- ಆಡಳಿತ' ಎಂಬ ರಾಷ್ಟ್ರೀಯ ವಿಚಾರ ಸಂಕಿರ ಉದ್ಘಾಟಿಸಿ, ಮಾತನಾಡಿದರು.
ಬೆಂಗಳೂರಿನ ಜೈನ್ ವಿವಿಯ ಉಪಕುಲಪತಿ ಡಾ. ಸಂದೀಪ್ ಶಾಸ್ತ್ರಿ ಅವರು ತಮ್ಮ ದಿಕ್ಸೂಚಿ ಭಾಷಣದಲ್ಲಿ ಕರ್ನಾಟಕ ಸರ್ಕಾರದ ಇ- ಆಡಳಿತದ ಸಾಧನಗಳಾದ ಭೂಮಿ, ಸಕಾಲ, ಕಾವೇರಿ, ಬೆಂಗಳೂರು ಒನ್, ಸಾರಿಗೆ, ಖಜಾನೆ, ಸಾಮಾನ್ಯ ಮಾಹಿತಿ, ಮುಖ್ಯ ವಾಹಿನಿ, ನೆಮ್ಮದಿ, ಎಚ್.ಆರ್.ಎಂ.ಎಸ್., ಸಚಿವಾಲಯ ವಾಹಿನಿಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ ಇವುಗಳ ಲೋಪದೋಷಗಳ ತಿದ್ದುಪಡಿಯಾಗಿ ಅವು ಸಾಮಾನ್ಯ ಜನರನ್ನು ತಲಪುವಂತಾಗಬೇಕು ಎಂದು ಹೇಳಿದರು.
ಈಗಾಗಲೇ ಸಮಾಜದಲ್ಲಿ ಡಿಜಿಟಲ್ ಜ್ಞಾನ ಇರುವವರು ಮತ್ತು ಇಲ್ಲದವರು ಎಂಬ ಕಂದಕ ಇದೆ. ಸಾಮಾನ್ಯ ಜನರು ಇ- ಜ್ಞಾನವನ್ನು ಹೊಂದುವಂತಾಗಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂತ ಮೇರಿ ಸಂಸ್ಥೆಗಳ ಸಂಚಾಲಕ ರೆ.ಫಾ. ಸ್ಟ್ಯಾನಿ ಟಾವ್ರೋ ಮಾತನಾಡಿ, ಇ- ಆಡಳಿತವನ್ನು ಸಾಮಾನ್ಯ ಜನರು ಬಳಸುವುದರ ಮೂಲಕ ರಾಜ್ಯದ ಅಭಿವೃದ್ಧಿ ಆಗಬೇಕು ಎಂದು ಅಭಿಪ್ರಾಯಪಟ್ಟರು. ಪ್ರಾಂಶುಪಾಲ ಪ್ರೊ.ವಿ.ಎನ್. ರಾಜನ್ ಸ್ವಾಗತಿಸಿದರು. ರಾಜ್ಯಶಾಸ್ತ್ರ ಸಂಘ ಕಾರ್ಯದರ್ಶಿ ಪ್ರೊ. ಕೃಷ್ಣಾನಂದ ಶಣೈ ಇದ್ದರು. ಸಂಘದ ಅಧ್ಯಕ್ಷ ಡಾ. ಪದ್ಮನಾಭ ಭಟ್ ವಂದಿಸಿದರು. ಪ್ರೊ. ಸುಬ್ರಹ್ಮಣ್ಯ ನಿರೂಪಿಸಿದರು.