ಗೊಂಬೆಯಾಟ ಕಲಾವಿದ ದಿನಕರ ಭಟ್ಗೆ ಶ್ರದ್ಧಾಂಜಲಿ
ಉಡುಪಿ: ಹುಟ್ಟಿದ ಮನುಷ್ಯ ಸಾಯಲೇ ಬೇಕಾದರೂ ಬದುಕಿನ ಹಾದಿಯಲ್ಲಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳುವ ರೀತಿ ನೀತಿ ಮುಖ್ಯವಾಗುತ್ತದೆ. ಅದರಂತೆ ದಿನಕರ ಭಟ್ ಅವರು ಕಲಾ ಜಗತ್ತಿಗೆ ತಮ್ಮದೇ ಕೊಡುಗೆಯನ್ನು ನೀಡಿ ದೇಶ- ವಿದೇಶಗಳಲ್ಲಿ ಸಂಚರಿಸಿ ಜನಪದ ಕಲೆಯಾದ ಯಕ್ಷಗಾನ ಗೊಂಬೆಯಾಟದೊಂದಿಗೆ ಬದುಕನ್ನು ಸಾರ್ಥಕಗೊಳಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ನಿರ್ದೇಶಕ ಭಾಸ್ಕರ್ ಕೊಗ್ಗ ಕಾಮತ್ ಹೇಳಿದರು. ಇತ್ತೀಚಿಗೆ ನಿಧನರಾದ ಗೊಂಬೆಯಾಟ ಕಲಾವಿದ ಎಚ್. ದಿನಕರ ಭಟ್ ಅವರಿಗೆ ಉಪ್ಪಿನಕುದ್ರು ಗೊಂಬೆಮನೆಯಲ್ಲಿ ಆಯೋಜಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ ನುಡಿ ನಮನ ಸಲ್ಲಿಸಿದರು. ಕಲಾವಿದರಾದ ಎಂ. ರತ್ನಾಕರ್ ಪೈ, ವಿಠಲ ಕಾಮತ್, ಮಹಾಬಲೇಶ್ವರ ಶೇಟ್, ಉಮೇಶ ಸುವರ್ಣ, ರಾಮ ಬಳೆಗಾರ್, ನಾರಾಯಣ ಬಿಲ್ಲವ, ಕುಮಾರ ಮೊಗವೀರ, ಮಂಜುನಾಥ ಮೈಪಾಡಿ, ಶ್ರೀನಿವಾಸ ಶೇಟ್ ಶ್ರದ್ಧಾಂಜಲಿ ಅರ್ಪಿಸಿದರು.