ಕುಂದಾಪುರ: ಬಿಲ್ವ ಸಸಿ ವಿತರಣೆ
ಕುಂದಾಪುರ: ಅಳಿವಿನಂಚಿನಲ್ಲಿರುವ ಸಸ್ಯ ಪ್ರಭೇದಗಳನ್ನು ಉಳಿಸಿ ಪರಿಸರ ಸಂರಕ್ಷಿಸುವ ಕಾರ್ಯ ನಮ್ಮೆಲ್ಲರಿಂದ ಆಗಬೇಕಿದೆ. ಈ ನಿಟ್ಟಿನಲ್ಲಿ ಕ್ಷೀಣಿಸುತ್ತಿರುವ ಬಿಲ್ವ ವೃಕ್ಷವನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಬಿಲ್ವ ವೃಕ್ಷ ಆಂದೋಲನ ಕಾರ್ಯ ನಿರ್ವಹಿಸುತ್ತಿದೆ ಎಂದು ಹಸಿರು ಭಾರತ ಆಂದೋಲನದ ವಿಶ್ವಸ್ಥ ಡಾ. ಉತ್ತಮ ಕುಮಾರ್ ಶೆಟ್ಟಿ ಹೇಳಿದ್ದಾರೆ.
ಇಲ್ಲಿನ ಶ್ರೀ ಮೂಕಾಂಬಿಕಾ ಮಹಿಳಾ ಮಂಡಳಿಗಳ ಒಕ್ಕೂಟ ಆಶ್ರಯದಲ್ಲಿ ಬಿಲ್ವವೃಕ್ಷ ಆಂದೋಲನ ಅಂಗವಾಗಿ ಹಮ್ಮಿಕೊಂಡ ಬಿಲ್ವವೃಕ್ಷ ಮಹತ್ವ ಹಾಗೂ ಸಸಿ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶ್ರೀಮೂಕಾಂಬಿಕಾ ಮಹಿಳಾ ಮಂಡಳಿಗಳ ಒಕ್ಕೂಟ ಅಧ್ಯಕ್ಷೆ ಕೆ.ರಾಧಾದಾಸ್, ಕಟ್ಟಡದ ಆವರಣದಲ್ಲಿ ಬಿಲ್ವ ಸಸಿಯನ್ನು ನೆಟ್ಟರು. ಬಳಿಕ ಮಹಿಳಾ ಮಂಡಳ ಸದಸ್ಯರಿಗೆ ಬಿಲ್ವಗಿಡಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ ಅಧ್ಯಕ್ಷ ರಂಜಿತ್ ಕುಮಾರ್ ಶೆಟ್ಟಿ, ಕುಂದಾಪುರ ತಾ.ಪಂ ಅಧ್ಯಕ್ಷೆ ದೀಪಿಕಾ ಶೆಟ್ಟಿ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಅಧಿಕಾರಿ ಭಾಗೀರಥಿ ಕಾರಂತ್, ಹಸಿರು ಭಾರತ ಆಂದೋಲನದ ವಿಶ್ವಸ್ಥ ಸಂತೋಷ ಕೋಣಿ, ಉದ್ಯಮಿಗಳಾದ ಆವರ್ಸೆ ಸುಧಾಕರ ಶೆಟ್ಟಿ, ಗೌತಮ ಹೆಗ್ಡೆ ಇದ್ದರು.
ರಾಧಾದಾಸ್ ಸ್ವಾಗತಿಸಿ, ನಿರೂಪಿಸಿದರು. ಜಯಂತಿ ಎನ್. ಐತಾಳ್ ವಂದಿಸಿದರು.