ಉಡುಪಿ: ಅನುದಾನ ವಿತರಣೆ, ಸಾವಯವ ಕೃಷಿ ಮಾಹಿತಿ
ಉಡುಪಿ: ಇಲ್ಲಿನ ಕುಕ್ಕೆಹಳ್ಳಿ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೃಷಿ ಇಲಾಖೆ ಮತ್ತು ಕುಕ್ಕೆಹಳ್ಳಿ ಸಾವಯವ ಗ್ರಾಮ ಯೋಜನೆಗಳ ಸಂಯುಕ್ತಾಶ್ರಯದಲ್ಲಿ ಸಾವಯವ ಗ್ರಾಮದ ಫಲಾನುಭವಿಗಳಿಗೆ ಅನುದಾನ ವಿತರಣೆ ಮತ್ತು ಸಾವಯವ ಕೃಷಿ ಮಾಹಿತಿ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮವನ್ನು ಶ್ರೀ.ಧ.ಗ್ರಾ. ಯೋಜನೆಯ ಜಿಲ್ಲಾ ನಿರ್ದೇಶಕ ದುಗ್ಗೇಗೌಡ ಉದ್ಘಾಟಿಸಿ, ರಾಜ್ಯ ಸರ್ಕಾರ ಪ್ರಾಯೋಜಿತ ಸಾವಯವ ಗ್ರಾಮಸ್ಥಳ ಯೋಜನೆಯನ್ನು ಕುಕ್ಕೆಹಳ್ಳಿ ಗ್ರಾಮದಲ್ಲಿ ಶ್ರೀ.ಧ.ಗ್ರಾ.ಯೋ. ಜಾರಿಗೊಳಿಸುತ್ತಿದ್ದು, ರೈತರು ಕ್ರಿಯಾಯೋಜನೆಯ ಪ್ರಕಾರ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಸಾವಯವ ಪದ್ಧತಿಯಲ್ಲಿ ಕೃಷಿ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಕ್ಕೆಹಳ್ಳಿ ಗ್ರಾಪಂ ಅಧ್ಯಕ್ಷ ಕಿರಣ್ ಕುಮಾರ್ ಹೆಗ್ಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯೆ ಗೋಪಿ ಕೆ. ನಾಯ್ಕ್ ಅನುದಾನ ವಿತರಿಸಿದರು. ಅತಿಥಿಗಳಾಗಿ ತಾಪಂ ಸದಸ್ಯೆ ನಾಗವೇಣಿ ಎಸ್. ಪುತ್ರನ್, ಯೋಜನೆಯ ತಾಲೂಕು ಯೋಜನಾಧಿಕಾರಿ ಮಾಲತಿ ದಿನೇಶ್, ಸಾವಯವ ಗ್ರಾಮ ಸಮಿತಿಯ ಅಧ್ಯಕ್ಷ ಪ್ರಕಾಶ್ ಹೆಬ್ಬಾರ್, ಸ್ಥಳಾಧಿಕಾರಿಗಳಾದ ರೂಪ ಮಾಡ, ಕೃಷಿ ಸಹಾಯಕ ಮಂಜುನಾಥ ಉಪಸ್ಥಿತರಿದ್ದರು.
ಉಡುಪಿ ತಾಲೂಕು ಸಾವಯವ ಕೃಷಿ ನಿರ್ದೇಶಕ ಕೃಷ್ಣಸ್ವಾಮಿ ರಾವ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. 38 ಜನ ಫಲಾನುಭವಿಗಳಿಗೆ 1,47,150 ಅನುದಾನ ವಿತರಿಸಲಾಯಿತು.
ಯೋಜನೆಯ ಹಿರಿಯಡ್ಕ ವಲಯದ ಮೇಲ್ವಿಚಾರಕ ಜಟ್ಟಾ ಎಂ. ನಿರೂಪಿಸಿದರು. ತಾಲೂಕು ಕೃಷಿ ಅಧಿಕಾರಿ ನಾರಾಯಣ್ ಸ್ವಾಗತಿಸಿದರು. ಹೈನುಗಾರಿಕೆ ಅಧಿಕಾರಿ ಸುರೇಶ್ ಹೆಗ್ಡೆ ವಂದಿಸಿದರು.