ಹಿಂದೂ ಮುಖಂಡರ ಬಂಧನ ಖಂಡಿಸಿ ಪ್ರತಿಭಟನೆ
ಮಣಿಪಾಲ: ಉತ್ತರ ಪ್ರದೇಶ ಸರ್ಕಾರವು ಮುಸ್ಲಿಮರ ಓಲೈಕೆಗಾಗಿ ವಿಶ್ವ ಹಿಂದೂ ಪರಿಷತ್ ಹಮ್ಮಿಕೊಂಡಿರುವ ಚೌರಾಸಿ ಕೋಸ್ ಪರಿಕ್ರಮ ಯಾತ್ರೆಯನ್ನು ನಿಷೇಧಿಸಿ, ಹಿಂದೂ ನಾಯಕರನ್ನು ಬಂಧಿಸಿದ್ದು, ಅವರನ್ನು ಕೂಡಲೆ ಬಿಡುಗಡೆಗೊಳಿಸಿ ಯಾತ್ರೆಗೆ ಸರ್ಕಾರವೇ ಭದ್ರತೆ ಒದಗಿಸಬೇಕು. ಇಲ್ಲದಿದ್ದರೆ ಸರ್ಕಾರ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ವಿಹಿಂಪ ಜಿಲ್ಲಾಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಎಚ್ಚರಿಸಿದ್ದಾರೆ.
ವಿಹಿಂಪ ಮತ್ತು ಬಜರಂಗದಳ ನೇತತ್ವದಲ್ಲಿ ಅಯೋಧ್ಯೆ ಪರಿಕ್ರಮ ಯಾತ್ರೆ ನಿಷೇಧ ಹಾಗೂ ತೊಗಾಡಿಯಾ, ಸಿಂಘಾಲ್ ಬಂಧನ ವಿರುದ್ಧ ಸೋಮವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ವಿಹಿಂಪ ಯಾವುದೇ ರಾಜಕೀಯವಿಲ್ಲದೆ ರಾಮಜನ್ಮ ಭೂಮಿಯಲ್ಲಿ ಮಂದಿರ ಕಟ್ಟುವ ಸಲುವಾಗಿ ಈ ಯಾತ್ರೆ ಕೈಗೊಂಡಿತ್ತು. ಆದರೆ ಉತ್ತರ ಪ್ರದೇಶ ಸರ್ಕಾರ ಮುಂದಿನ ಚುನಾವಣೆಯನ್ನು ದಷ್ಟಿಯಲ್ಲಿಟ್ಟುಕೊಂಡು ಮತಗಳನ್ನು ಸೆಳೆಯಲು ಧಾರ್ಮಿಕತೆಯಲ್ಲಿ ರಾಜಕೀಯ ತರುತ್ತಿದೆ. ಇದಕ್ಕೆ ಬೆಂಬಲ ನೀಡುತ್ತಿರುವ ಕೇಂದ್ರ ಯುಪಿಎ ಸರ್ಕಾರ ಹೆಚ್ಚು ದಿನ ಬಾಳುವುದಿಲ್ಲ. ಕೆಲವೇ ದಿನಗಳಲ್ಲಿ ಪತನವಾಗಲಿದೆ ಎಂದರು.
ಆರ್‌ಎಸ್‌ಎಸ್ ಮುಖಂಡ ಸುಬ್ರಹ್ಮಣ್ಯ ಹೊಳ್ಳ ಮಾತನಾಡಿ, ಕೋರ್ಟ್ ತೀರ್ಪಿನ ಪ್ರಕಾರ ಅಯೋಧ್ಯೆಯಲ್ಲಿ ರಾಮ ಮಂದಿರ ಕಟ್ಟುವ ಕಾರ್ಯಕ್ಕೆ ವೇಗ ನೀಡಲು ಹಾಗೂ ಹರಕೆಯಂತೆ ಈ ಯಾತ್ರೆಯನ್ನು ಆಯೋಜಿಸಲಾಗಿತ್ತು. ಆದ್ದರಿಂದ ಎಂತಹ ಅಡೆತಡೆ ಬಂದರೂ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಸಂಕಲ್ಪ ಪೂರ್ಣಗೊಳಿಸುತ್ತೇವೆ ಎಂದರು.
ಪ್ರತಿಭಟನೆ ನಂತರ ಬಂಧಿತ ಹಿಂದೂ ನಾಯಕರನ್ನು ಕೂಡಲೆ ಬಿಡುಗಡೆಗೊಳಿಸಬೇಕು ಹಾಗೂ ಯಾತ್ರೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.
ಆರ್‌ಎಸ್‌ಎಸ್ ನಾಯಕರಾದ ಕೇಶವರಾಯ ಪ್ರಭು, ಟಿ. ಶಂಭು ಶೆಟ್ಟಿ, ಬಜರಂಗದಳದ ಸುನಿಲ್ ಕೆ.ಆರ್., ಬಿಜೆಪಿ ನಾಯಕರಾದ ಲಾಲಾಜಿ ಆರ್. ಮೆಂಡನ್, ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ವಿಲಾಸ್ ನಾಯಕ್, ಗೀತಾಂಜಲಿ ಸುವರ್ಣ, ಗೀತಾ ರವಿ ಶೇಟ್, ಗಣೇಶ್ ಕಿಣಿ, ನಾರಾಯಣ ಮಡಿ, ಉದಯ ಕುಮಾರ್ ಮುಂತಾದವರು ಇದ್ದರು.