ಅಡಕೆ ಸುರಿದು ಆಕ್ರೋಶ, ಸಾಲ ಮನ್ನಾ ಆಗ್ರಹ
ಸುಳ್ಯ: ಅಡಕೆ ಬೆಳೆಗೆ ವ್ಯಾಪಕ ಕೊಳೆ ರೋಗ ಬಾಧಿಸಿದ ಹಿನ್ನೆಲೆಯಲ್ಲಿ ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಸುಳ್ಯ ತಾಲೂಕು ಘಟಕದ ನೇತೃತ್ವದಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶವು ಮಂಗಳವಾರ ಸುಳ್ಯದಲ್ಲಿ ನಡೆಯಿತು.
ಅಡಕೆ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ, ಎಕರೆಗೆ ರು. 50,000 ಪರಿಹಾರ ಮತ್ತು ಹಳದಿ ರೋಗ ಪೀಡಿತ ಅಡಕೆ ತೋಟದ ಬೆಳೆಗಾರರಿಗೆ ವಿಶೇಷ ಪರಿಹಾರ ಈ ಮೂರು ಪ್ರಮುಖ ಹಕ್ಕೊತ್ತಾಯವನ್ನು ಮುಂದಿರಿಸಿ ಸಮಾವೇಶ ಹಮ್ಮಿಕೊಳ್ಳಲಾಯಿತು.
ಇದಕ್ಕೂ ಮೊದಲು ಶಾಸ್ತ್ರಿ ವೃತ್ತದಿಂದ ಅಡಕೆ ಬೆಳೆಗಾರರ ಬೃಹತ್ ಜಾಥಾ ನಡೆಯಿತು. ಸಾವಿರಾರು ರೈತರು ಜಾಥಾ ಮತ್ತು ಸಮಾವೇಶದಲ್ಲಿ ಭಾಗವಹಿಸಿದ್ದರು. ಎ.ಪಿ.ಎಂ.ಸಿ. ಮಹಾದ್ವಾರದ ಬಳಿ ಅಡಕೆ ಬೆಳೆಗಾರರು ತಾವು ತಂದಿದ್ದ ಕೊಳೆರೋಗ ಬಾಧಿತ ಅಡಕೆಯನ್ನು ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ಬದುಕಿನ ವಿಚಾರ: ಅಡಕೆ ಬೆಳೆಗಾರರ ಸಂಘದ ಸಂಚಾಲಕ ಎಂ.ಡಿ. ವಿಜಯಕುಮಾರ್ ಮಾತನಾಡಿ, ಬೆಳೆಗಾರ ಈಗ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೆ, ಸತ್ತಂತೆಯೇ ಇದ್ದಾನೆ. ನಾವು ಪೂರ್ತಿ ಸಾಯುವವರೆಗೂ ಕಾಯಬೇಡಿ. ಬದಲಾಗಿ ಬದುಕು ಕಟ್ಟಿಕೊಡಿ. ಬೆಳೆಗಾರನ ಸಮಸ್ಯೆ ಪಕ್ಷದ ವಿಚಾರ ಅಲ್ಲ, ಬದುಕಿನ ವಿಚಾರ. ಹೀಗಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಿದರೆ ಮಾತ್ರ ನಮಗೆ ಫಲ ಸಿಗುತ್ತದೆ ಎಂದರು.
ಬಿಜೆಪಿ ನಾಯಕ ಎ.ವಿ. ತೀರ್ಥರಾಮ, ಜೆಡಿಎಸ್ ನಾಯಕ ಜಾಕೆ ಮಾಧವ ಗೌಡ, ಶಾಸಕ ಎಸ್.ಅಂಗಾರ, ಪತ್ರಿಕೋದ್ಯಮಿ ಡಾ. ಯು.ಪಿ. ಶಿವಾನಂದ, ರೈತ ಸಂಘದ ನಾಯಕ ರವಿಕಿರಣ ಪುಣಚ ಮಾತನಾಡಿದರು.
ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಜಯರಾಮ ಹಾಡಿಕಲ್ಲು ಕಾರ್ಯಕ್ರಮ ನಿರೂಪಿಸಿದರು. ಪಿ.ಎಸ್. ಗಂಗಾಧರ್ ವಂದಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ಜೆಡಿಎಸ್ ಅಧ್ಯಕ್ಷ ಚಂದ್ರಾ ಕೋಲ್ಚಾರ್, ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಉಪಾಧ್ಯಕ್ಷ ಎಂ.ಜಿ. ಸತ್ಯನಾರಾಯಣ ಮತ್ತಿತರರು ಇದ್ದರು.
ವೇದಿಕೆಯೇರದ ಉಸ್ತುವಾರಿ ಸಚಿವ
ಹಕ್ಕೊತ್ತಾಯ ಸಭೆಯ ಮಧ್ಯೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ವೇದಿಕೆ ಏರದೆ, ಯಾವುದೇ ಭರವಸೆದಾಯಕ ಮಾತುಗಳನ್ನೂ ಆಡದೆ ತೆರಳಿದ್ದು ಜನರ ಅಸಮಾಧಾನಕ್ಕೆ ಕಾರಣವಾಯಿತು.
ಬೆಳೆಗಾರರ ಹಕ್ಕೊತ್ತಾಯ ಸಮಾವೇಶಕ್ಕೆ ಪಕ್ಷ ಭೇದ ಮರೆತು ಜನ ಸೇರಿದ್ದರು. ಸಮಾವೇಶ ಸ್ಥಳಕ್ಕೆ ಬಂದ ರೈಯವರು, 'ನಿಮ್ಮ ಮನವಿ ಕೊಡಿ' ಎಂದು ಹೇಳುತ್ತಾ ವೇದಿಕೆಯ ಮುಂಭಾಗಕ್ಕೆ ಬಂದರು.
ವೇದಿಕೆಯಲ್ಲಿದ್ದ ಅಣ್ಣಾ ವಿನಯಚಂದ್ರ ಹಾಗೂ ಅಡಕೆ ಬೆಳೆಗಾರರ ಸಂಘದ ಪದಾಧಿಕಾರಿಗಳು ವೇದಿಕೆಗೆ ಬರುವಂತೆ ಒತ್ತಾಯಿಸಿದರೂ ಸಚಿವರು ವೇದಿಕೆಯೇರಲಿಲ್ಲ. ಬಳಿಕ ಕೆಳಗೆ ನಿಂತೇ ಮನವಿ ಸ್ವೀಕರಿಸಿದ ಅವರು, ಬೆಳೆಗಾರರ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸುತ್ತೇನೆ ಎಂದಷ್ಟೇ ಹೇಳಿ ನಿರ್ಗಮಿಸಿದರು. ಅವರ ಬೆನ್ನಿಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ತೆರಳಿದರು.
ಈ ಕುರಿತಂತೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ಬಿ. ರಮಾನಾಥ ರೈ, 'ಅಡಕೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುವ ಸಲುವಾಗಿಯೇ ನಾನು ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಏನು ಸ್ಪಂದನೆ ಎನ್ನುವುದು ಶೀಘ್ರದಲ್ಲಿಯೇ ಗೊತ್ತಾಗುತ್ತದೆ, ಸಮಾವೇಶಕ್ಕೆ ನನಗೆ ಆಮಂತ್ರಣ ಇರಲಿಲ್ಲ. ನಾನು ಹೋದದ್ದೇ ವಿಶೇಷ. ಸಮಸ್ಯೆ ಬಗೆಹರಿಸುವ ಸ್ಥಾನದಲ್ಲಿರುವ ನಾವು ವೇದಿಕೆ ಏರುವುದಲ್ಲಿ ಅರ್ಥವಿಲ್ಲ. ಹಾಗಾಗಿ ಮನವಿ ಸ್ವೀಕರಿಸಿ ಬಂದಿದ್ದೇನೆ' ಎಂದು ಹೇಳಿದರು.