26 ಜಿಲ್ಲೆಗಳಲ್ಲಿ ಹಿರಿಯ ನಾಗರಿಕರ ಯೋಗಕ್ಷೇವು ಕೇಂದ್ರ ಸ್ಥಾಪನೆ
ಉಡುಪಿ: ರಾಜ್ಯದ 26 ಜಿಲ್ಲೆಗಳಲ್ಲಿ ಹಿರಿಯ ನಾಗರಿಕರ ಹಗಲು ಯೋಗ ಕ್ಷೇಮ ಕೇಂದ್ರಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಸ್ಥಾಪಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರ ಸಬಲೀಕರಣ ಖಾತೆ ಸಚಿವೆ ಉಮಾಶ್ರೀ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಅವರು ಜು. 24ರಂದು ವಿಧಾನಸಭೆಯಲ್ಲಿ ಹಿರಿಯ ನಾಗರಿಕರ ಬಗ್ಗೆ ಕೇಂದ್ರದ ಎನ್.ಪಿ.ಓ.ಪಿ. ಯೋಜನೆ ರಾಜ್ಯದಲ್ಲಿ ಜಾರಿಗೆ ತರಲು ಕೈಗೊಂಡ ಕ್ರಮಗಳ ಬಗ್ಗೆ ಮತ್ತು ರಾಜ್ಯಮಟ್ಟದ ಹಿರಿಯ ನಾಗರಿಕರ ಕೌನ್ಸಿಲ್ ಪ್ರಾರಂಭಿಸುವ ಪ್ರಸ್ತಾವನೆ ಹಾಗೂ ಹಿರಿಯ ನಾಗರಿಕರ ಡೇ ಕೇರ್ ಸೆಂಟರ್ ತೆರೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಶ್ನೆ ಕೇಳಿದ್ದರು.
ಇದಕ್ಕೆ ಉತ್ತರಿಸಿರುವ ಸಚಿವೆ, ಕೇಂದ್ರದ ಎನ್.ಪಿ.ಓ.ಪಿ. ಯೋಜನೆ ಈಗಾಗಲೇ ರಾಜ್ಯದಲ್ಲಿ ಜಾರಿಗೆ ಬಂದಿದೆ. ಹಿರಿಯ ನಾಗರಿಕರ ರಾಜ್ಯ ಪರಿಷತ್ ಈಗಾಗಲೇ ರಾಜ್ಯದಲ್ಲಿ ರಚಿಸಲಾಗಿದೆ. ಇದಕ್ಕೆ 4 ಜನ ಹಿರಿಯ ನಾಗರಿಕರು ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ 4 ಎನ್.ಜಿ.ಓ.ಗಳ ಪ್ರತಿನಿಧಿಗಳನ್ನು ನಾಮನಿರ್ದೇಶನ ಪ್ರಕ್ರಿಯೆ ಜಾರಿಯಲ್ಲಿದೆ.
ಬೆಂಗಳೂರು, ಬೆಳಗಾವಿ, ಧಾರವಾಡ ಮತ್ತು ಗುಲ್ಬರ್ಗಾದಲ್ಲಿ ಎನ್.ಜಿ.ಓ.ಗಳ ಮೂಲಕ ಡೇ ಕೇರ್ ಸೆಂಟರ್‌ಗಳನ್ನು ತೆರೆಯಲಾಗಿದ್ದು, ಉಳಿದ 26 ಜಿಲ್ಲೆಗಳಲ್ಲೂ ತೆರೆಯುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ತಿಳಿಸಿದ್ದಾರೆ ಎಂದು ಶಾಸಕರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.