ಮತ್ತಾವು ಸೇತುವೆಗೆ ಅನುದಾನ ಮಂಜೂರು
ಹೆಬ್ರಿ: ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಕ್ಸಲ್ ಬಾಧಿತ ಕಬ್ಬಿನಾಲೆಯ ಮತ್ತಾವಿನ ಮಲೆಕುಡಿಯ ಕುಟುಂಬಗಳಿರುವ ಪ್ರದೇಶಕ್ಕೆ ಕೊನೆಗೂ ಸೇತುವೆ ಮಂಜೂರಾಗಿದೆ.
ರಾಜ್ಯಾದ್ಯಂತ ಭಯ ಸೃಷ್ಟಿಸಿದ 2005ರಲ್ಲಿ ನಕ್ಸಲರು ಪೊಲೀಸರ ಮೇಲೆ ನಡೆಸಿದ ಮತ್ತಾವು ಬಾಂಬ್ ದಾಳಿಗೆ (ಜು. 28) ಸರಿಯಾಗಿ ಎಂಟು ವರ್ಷ ತುಂಬಿದೆ.
ಮತ್ತಾವಿಗೆ ಎಲ್ಲಾ ಸೌಲಭ್ಯಗಳು ಬಂದರು ಸೇತುವೆ ಮಾತ್ರ ಆಗಿರಲೇ ಇಲ್ಲ. ನಕ್ಸಲ್ ಪೀಡಿತ ಕಬ್ಬಿನಾಲೆಯ ಮತ್ತಾವಿನ ಮನೆ ಮಂದಿ 10 ಮನೆಗಳಿರುವ ಮತ್ತಾವಿನ ಮಲೆಕುಡಿಯ ಜನಾಂಗದ ಮೂಲ ಸೌಕರ್ಯದ ಹಲವು ಬೇಡಿಕೆಯನ್ನು ಈಡೇರಿಸಲು ಹಲವು ವರ್ಷಗಳಿಂದ ಒತ್ತಾಯಿಸುತ್ತ ಬಂದಿದ್ದರು.
ಮುದ್ರಾಡಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರು, ಶಾಸಕರು ಸೇರಿದಂತೆ ನಕ್ಸಲ್ ಪೀಡಿತ ಇಲ್ಲಿನ ಮಲೆಕುಡಿಯ ಮನೆಮಂದಿಯ ಕಷ್ಟಗಳಿಗೆ ಸ್ಪಂದಿಸುತ್ತ ಬಂದಿದ್ದರು. ಮುದ್ರಾಡಿ ಗ್ರಾಮ ಪಂಚಾಯಿತಿನಿಂದ ಸೋಲಾರ್ ದೀಪಗಳನ್ನು ನೀಡಲಾಗಿದೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅಗತ್ಯ ಕೆಲಸಗಳನ್ನು ನಿರ್ವಹಿಸಲಾಗಿದೆ. ರಸ್ತೆ ದುರಸ್ತಿ ಜೊತೆಗೆ ಹಲವರಿಗೆ ವೈಯಕ್ತಿಕ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ, ಅಗತ್ಯದ ಮತ್ತಾವು ಸೇತುವೆ ಮಾತ್ರ ಆಗಲೇ ಇಲ್ಲ.
22 ಲಕ್ಷ ಮಂಜೂರು: ಕಬ್ಬಿನಾಲೆ- ಮತ್ತಾವಿಗೆ ಮುದ್ರಾಡಿ ಗ್ರಾಮ ಪಂಚಾಯಿತಿ ವತಿಯಿಂದ ವಿಶೇಷ ಪ್ಯಾಕೇಜ್ ಮೂಲಕ ಘನ ಸೇತುವೆ ನಿರ್ಮಾಣಕ್ಕೆ ರು. 22 ಲಕ್ಷ ಅನುದಾನ ಮಂಜೂರುಗೊಳಿಸಲಾಗಿದೆ. ಅತೀ ಶೀಘ್ರವಾಗಿ ಕಾಮಾಗಾರಿ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ ತಿಳಿಸಿದ್ದಾರೆ.