ಸುದ್ದಿ ಸಂಕ್ಷೇಪ
ಜಿಲ್ಲೆಯಾದ್ಯಂತ 8.76 ಮಿ.ಮೀ. ಮಳೆ
ಉಡುಪಿ: ಕರಾವಳಿಯಾದ್ಯಂತ ಮಳೆ ಇಳಿಮುಖವಾಗಿದ್ದು, ಬಿಸಿಲಿನ ತಾಪಮಾನ ಜೋರಾಗಿದೆ. ಆದರೆ, ಬುಧವಾರ ಸಂಜೆ ಹೊತ್ತು ಸಾಧರಣವಾಗಿ ಮಳೆ ಬಂದಿದ್ದು ವಾತವರಣವನ್ನು ತಂಪು ಮಾಡಿದೆ. ಗುರುವಾರ ಜಿಲ್ಲೆಯಲ್ಲಿ ಮತ್ತೆ ಬಿಸಿಲು ಆವರಿಸಿಕೊಂಡಿದೆ. ಜಿಲ್ಲೆಯಲ್ಲಿ ಗುರುವಾರ ಮುಂಜಾನೆವರೆಗೂ 24 ಗಂಟೆಗಳಲ್ಲಿ ಸರಾಸರಿ 8.76 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 15.3 ಮಿ.ಮೀ., ಕುಂದಾಪುರ ತಾಲೂಕಿನಲ್ಲಿ 4.6 ಮಿ.ಮೀ., ಕಾರ್ಕಳ ತಾಲೂಕಿನಲ್ಲಿ 6.4 ಮಿ.ಮೀ. ಮಳೆಯಾಗಿದೆ.
ಪೆರ್ಡೂರು: ಜಮಾಬಂದಿ ಸೆ. 7ಕ್ಕೆ ಮುಂದೂಡಿಕೆ
ಹೆಬ್ರಿ: ಪೆರ್ಡೂರು ಪಂಚಾಯಿತಿ 2012- 13ನೇ ಸಾಲಿನ ಜಮಾಬಂದಿಯು ಮುಂದೂಡಿದ್ದು, ಸೆ. 5ರ ಬದಲು ಸೆ. 7ರಂದು ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಪಂಚಾಯಿತಿಯ ಪ್ರಕಟಣೆ ತಿಳಿಸಿದೆ.
ಸಂಖ್ಯಾ- 2013: ಎಂಜಿಎಂಸಿಗೆ ಸಮಗ್ರ ಪ್ರಶಸ್ತಿ
ಉಡುಪಿ: ಇಲ್ಲಿನ ಪೂರ್ಣಪ್ರಜ್ಞ ಕಾಲೇಜಿನ ಸಂಖ್ಯಾಶಾಸ್ತ್ರ ವಿಭಾಗವು ಅಂತಾರಾಷ್ಟ್ರೀಯ ಸಂಖ್ಯಾಶಾಸ್ತ್ರ ವರ್ಷದ ಅಂಗವಾಗಿ ನಡೆಸಿದ ಮಂಗಳೂರು ವಿವಿ ಮಟ್ಟದ ಸ್ಪರ್ಧೆಯಲ್ಲಿ ಸ್ಪರ್ಧೆ ಸಂಖ್ಯಾ- 2013ರಲ್ಲಿ ಉಡುಪಿಯ ಎಂಜಿಎಂ ಕಾಲೇಜು ಸಮಗ್ರ ಪ್ರಶಸ್ತಿ ಗೆದ್ದುಕೊಂಡಿದೆ. ಉಜಿರೆಯ ಎಸ್ಡಿಎಂ ಕಾಲೇಜು ದ್ವಿತೀಯ ಬಹುಮಾನ ಗಳಿಸಿದೆ. ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಪ್ರದೀಪ್ ಕುಮಾರ್ ಪ್ರಶಸ್ತಿ ವಿತರಿಸಿ ಅಭಿನಂದಿಸಿದರು. ಪೂರ್ಣಪ್ರಜ್ಞಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ನಿರ್ದೇಶಕ ಡಾ.ಎಂ. ಆರ್. ಹೆಗಡೆ, ಪ್ರಾಂಶುಪಾಲ ಸದಾಶಿವ ರಾವ್ ಇದ್ದರು. ಮಧು ಭಟ್ ಸ್ವಾಗತಿಸಿ, ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕಿಶೋರ್ ರಾವ್ ವಂದಿಸಿದರು. ಸುಜಿತ್ ಕಾರ್ಯಕ್ರಮ ನಿರೂಪಿಸಿದರು.
ಕಾಪು ಸಿದ್ಧಿವಿನಾಯಕ ದೇವಸ್ಥಾನ: ಸಾವಿರಾರು ಮೌಲ್ಯದ ಸೊತ್ತು ಕಳವು
ಕಾಪು: ಇಲ್ಲಿನ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬುಧವಾರ ರಾತ್ರಿ ಕಳ್ಳತನ ನಡೆದಿದೆ. ಕಳ್ಳರು ದೇವಾಲಯದ ಬಾಗಿಲಿಗೆ ಹಾಕಿದ ಬೀಗವನ್ನು ಚಿಲಕ ಸಮೇತ ಆಯುಧದಿಂದ ಮೀಟಿ ತೆಗೆದು ಒಳಪ್ರವೇಶಿಸಿದ್ದು, ಗಣಪತಿ ದೇವರ ಬಲಿಮೂರ್ತಿ, ಬೆಳ್ಳಿಯ ಹೊದಿಕೆ, ಕಂಚಿನ ಪೀಠದ ಸುಮಾರು 2 ಕೆ.ಜಿ. ತೂಕದ ಹಳೆಯ ಗಣಪತಿ ವಿಗ್ರಹ, ಹುಂಡಿಯಲ್ಲಿದ್ದ ಹಣ, ಬೆಳ್ಳಿ ಹೊದಿಕೆ ಇರುವ ಶಂಖ, ಕಲ್ಕುಡ ದೈವಸ್ಥಾನದ ಹುಂಡಿಯನ್ನು ಕಳವು ಮಾಡಿದ್ದಾರೆ. ಅನ್ನದಾನ ಹುಂಡಿಯ ಕಳವಿಗೂ ಯತ್ನಿಸಿದ್ದು, ಆದರೆ, ಸಾಧ್ಯವಾಗಲಿಲ್ಲ. ಕಳವಾದ ಸ್ವತ್ತುಗಳ ಅಂದಾಜು ಮೌಲ್ಯ ಸುಮಾರು ರು. 40,000 ಎಂದು ಚಕ್ರಪಾಣಿ ಎಂ. ಭಟ್ ಅವರು ನೀಡಿದ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಂಬೆಗೆ ಶಿವರಾಮ ಕಾರಂತ ಬಾಲವನ ಪ್ರಶಸ್ತಿ
ಪುತ್ತೂರು: ಡಾ. ಶಿವರಾಮ ಕಾರಂತರ ಜನ್ಮ ದಿನಾಚರಣೆ ಅಂಗವಾಗಿ ನೀಡಲಾಗುತ್ತಿರುವ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿಗೆ ಖ್ಯಾತ ರಂಗ ನಿರ್ದೇಶಕ ಮತ್ತು ರಾಷ್ಟ್ರೀಯ ನಾಟಕ ಶಾಲೆ ದೆಹಲಿಯ ಬೆಂಗಳೂರು ಘಟಕದ ಸಂಯೋಜಕ ಚಿದಂಬರ ರಾವ್ ಜಂಬೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಬಾಲವನ ಸಮಿತಿ ಅಧ್ಯಕ್ಷ ಮತ್ತು ಪುತ್ತೂರು ಸಹಾಯಕ ಆಯುಕ್ತ ಎಚ್. ಪ್ರಸನ್ನ ತಿಳಿಸಿದ್ದಾರೆ. ಡಾ. ಶಿವರಾಮ ಕಾರಂತರ ಆಸಕ್ತಿಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಈಗಾಗಲೇ ಸಾಹಿತ್ಯ, ಯಕ್ಷಗಾನ ಮತ್ತು ಬಾಲ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ. ಆ.28ರಂದು ನಡೆದ ಬಾಲವನ ಸಮಿತಿ ಸಭೆಯಲ್ಲಿ ಜಂಬೆ ಅವರನ್ನು ಆಯ್ಕೆ ಮಾಡಲಾಗಿದೆ. ಅಕ್ಟೋಬರ್ 10ರಂದು ಬಾಲವನದಲ್ಲಿ ನಡೆಯುವ ಡಾ. ಶಿವರಾಮ ಕಾರಂತರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅತಿಥಿ ಶಿಕ್ಷಕರ ನೇಮಕಕ್ಕೆ ಪ್ರತ್ಯೇಕ ನಿಯಮಾವಳಿ: ಕಿಮ್ಮನೆ ರತ್ನಾಕರ್
ಬೆಳ್ತಂಗಡಿ: ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷಕರ ಹುದ್ದೆಗಳನ್ನು ತುಂಬಲು 12 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ಚಾಲನೆ ನೀಡಿದ್ದು, ಇದಕ್ಕೆ ಪ್ರತ್ಯೇಕ ನಿಯಮಾವಳಿ ರೂಪಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದರು. ಅವರು ಬುಧವಾರ ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ, ತಮ್ಮನ್ನು ಭೇಟಿಯಾದ ಶಿಕ್ಷಕರ ನಿಯೋಗಕ್ಕೆ ಈ ಕುರಿತು ಮಾಹಿತಿ ನೀಡಿದರು. ಈ ಸಂದರ್ಭ ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಮಂಗಲ ಪಿ. , ಅಕ್ಷರದಾಸೋಹ ಸಹನಿರ್ದೇಶಕ ಯಶೋಧರ, ಬೆಳ್ತಂಗಡಿ ತಾಲೂಕು ಪ್ರೌಢಶಾಲಾ ಸಹಶಿಕ್ಷಕ ಸಂಘದ ಕಾರ್ಯದರ್ಶಿ ಮಹಮದ್ ರಿಯಾಜ್, ಕೃಷ್ಣ ಮಯ್ಯ ಎಸ್.ಡಿ.ಎಂ ಉಜಿರೆ, ಎಸ್.ಡಿ.ಎಂ. ಅನುದಾನಿತ ಹಿ.ಪ್ರಾ.ಶಾಲೆ, ಧರ್ಮಸ್ಥಳದ ಮುಖ್ಯ ಶಿಕ್ಷಕ ಸೋಮಶೇಖರ ಶೆಟ್ಟಿ ಇದ್ದರು.