ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಅಜ್ಜರಕಾಡಲ್ಲೊಂದು ಹೊಸ ಡಂಪಿಂಗ್ ಯಾರ್ಡ್

Mainashree
Updated On : 1 Sept 2013, 10:28 am

ವಿಶೇಷ ವರದಿ
ಉಡುಪಿ: ನಗರಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇನೋ ಬಹುಮತ ಪಡೆದಿದೆ, ಆದರೆ ಇನ್ನೂ ಅಧಿಕಾರ ಅವರ ಕೈಗೆ ಬಂದಿಲ್ಲ, ಆದ್ದರಿಂದ ಕೆಲವು ತಿಂಗಳಿಂದ ಅಲ್ಲಿನ ಅಧಿಕಾರಿಗಳು ಆಡಿದ್ದೇ ಆಟವಾಗಿಬಿಟ್ಟಿದೆ.
 ನಗರಸಭೆಯ ಅಜ್ಜರಕಾಡು ವಾರ್ಡಿನ ತ್ಯಾಜ್ಯವನ್ನು ನಗರದ ಹೃದಯದಂತಿರುವ ಭುಜಂಗ ಪಾರ್ಕು- ಮಹಾತ್ಮ ಗಾಂಧಿ ಕ್ರೀಡಾಂಗಣದ ಬಳಿ ಸಂಗ್ರಹ ಮಾಡಲಾಗುತ್ತಿದೆ. ಪಾರ್ಕಿಗೆ ಬರುವ ಸಾವಿರಾರು ಮಂದಿ ಹಿರಿಯ ನಾಗರಿಕರಿಗೆ, ಕ್ರೀಡಾಂಗಣಕ್ಕೆ ಅಭ್ಯಾಸಕ್ಕಾಗಿ ಬರುವ ನೂರಾರು  ಕ್ರೀಡಾಪಟುಗಳು ಇದರಿಂದ ಅಸಹನೀಯ ವಾತಾವರಣ ಅನುಭವಿಸುವಂತಾಗಿದೆ.
 ಈ ಬಗ್ಗೆ ಹಿರಿಯ ನಾಗರಿಕರು ನಗರಸಭೆಗೆ ದೂರು ನೀಡಿದರೆ, 'ತ್ಯಾಜ್ಯವನ್ನು ಅಲ್ಲಿ ಹಾಕುವುದು ಬೇಡ ಎಂದಾದರೇ ಬೇರೆ ಎಲ್ಲಿ ಹಾಕಬೇಕು ನೀವೇ ಜಾಗ ತೋರಿಸಿ.' ಎಂದು ಅಧಿಕಾರಿಗಳಿಂದ ಉಡಾಫೆಯ ಮಾತು ಬಂದಿದೆ.
ಹಿರಿಯ ನಾಗರಿಕರ ಪ್ರತಿಭಟನೆ: ಸ್ಥಳೀಯ ಕೌನ್ಸಿಲರ್ ಬಳಿ ದೂರಿದರೂ, ನೋಡೋಣ ಎಂಬ ಉತ್ತರವಷ್ಟೇ ಬಂದಿದೆ, ಅವರು ಇದುವರೆಗೂ ಕನಿಷ್ಟ ಈ ಸ್ಥಳಕ್ಕೆ ಬಂದು ಏನಾಗುತ್ತಿದೆ ಎಂದು ನೋಡಿದಂತೆಯೂ ಇಲ್ಲ, ಅಧಿಕಾರಿಗಳಿಗೆ ಹೇಳಿದಂತೆಯೂ ಇಲ್ಲ.
ಕೊನೆಗೆ ಬೇರೆ ದಾರಿ ಇಲ್ಲದೇ ಒಂದಷ್ಟು ಮಂದಿ ಹಿರಿಯ ನಾಗರಿಕರು ಶನಿವಾರ ಭುಜಂಗ ಪಾರ್ಕಿನ ಹೊರಗೆ, ನಗರಸಭೆಯ ತ್ಯಾಜ್ಯ ಸಂಗ್ರಹ ಸ್ಥಳದ ಬಳಿ ಪ್ರತಿಭಟನೆ ಮಾಡಿದರು.
ಪಾರ್ಕಿನಲ್ಲಿ ಅಶುದ್ಧ ಗಾಳಿ: ಈ ಸಂದರ್ಭದಲ್ಲಿ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ಹಿರಿಯರಾದ ದೀಪಕ್, ಮಳೆಗಾಲ ಆರಂಭವಾದ ಮೇಲೆ ದಿಢೀರನೇ ಈ ಅನಧಿಕೃತ ಡಂಪಿಂಗ್‌ಯಾರ್ಡ್ ಇಲ್ಲಿ ಸೃಷ್ಟಿಯಾಗಿದೆ. ಇಲ್ಲಿರುವ ಲಾರಿಗೆ ನಿತ್ಯ ನಗರದ ಎಲ್ಲ ಬಗೆಯ ತ್ಯಾಜ್ಯಗಳನ್ನು ತಂದು ತುಂಬಿಸುತ್ತಾರೆ ಎಂದರು.
 ವಾರಗಟ್ಟಲೇ ಅದು ಅಲ್ಲಿಯೇ ಕೊಳೆಯುತ್ತಿರುತ್ತದೆ. ದುರ್ನಾತದಿಂದ ನಾವು (ಹಿರಿಯ ನಾಗರಿಕರು) ಪಾರ್ಕಿನಲ್ಲಿ ವಾಕಿಂಗ್ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ನಾವು ಶುದ್ಧ ಗಾಳಿ ಸಿಗುತ್ತದೆ ಎಂದು ಪಾರ್ಕಿಗೆ ಬರುತ್ತಿದ್ದೇವೆ. ಆದರೆ ಅಲ್ಲಿ ಅಶುದ್ಧ ಗಾಳಿಯೇ ತುಂಬಿದೆ. ಇದಕ್ಕೆ ನಗರಸಭೆಯ ನೇರ ಹೊಣೆ ಎಂದು ಆರೋಪಿಸಿದರು.
 ನಗರಸಭೆಯೇ ರು. 4.50 ಕೋಟಿ ಖರ್ಚು ಮಾಡಿ ಈ ಪಾರ್ಕ್ ನಿರ್ಮಿಸಲಾಗಿದೆ. ಹಿರಿಯರಿಗೆ ಅನುಕೂಲವಾಗಲಿ ಅಂತ ವಾಕಿಂಗ್ ಟ್ರ್ಯಾಕ್ ಕೂಡ ಹಾಕಿದೆ. ಆದರೆ ವಾಕಿಂಗ್ ಮಾಡುವುದಕ್ಕೆ ನಗರಸಭೆಯೇ ತೊಂದರೆ ನೀಡುತ್ತಿದೆ. ಹಾಗಾದ್ರೆ ಪಾಕಿರ್ಗೆ ಯಾಕೆ ಸಾರ್ವಜನಿಕರಿಗೆ ಪ್ರವೇಶ ನೀಡಬೇಕು, ಪಾರ್ಕು ನಿರ್ಮಿಸಲು ಯಾಕೆ ಇಷ್ಟು ಖರ್ಚು ಮಾಡಬೇಕಿತ್ತು, ವಾಕಿಂಗ್ ಟ್ರ್ಯಾಕ್ ಯಾಕೆ ನಿರ್ಮಿಸಬೇಕಾಗಿತ್ತು ಎಂದು ಪ್ರಶ್ನಿಸಿತ್ತಾರೆ ನಿವೃತ್ತ ಅಧಿಕಾರಿ ವಿಶ್ವನಾಥ ಸಾಲ್ಯಾನ್, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಿರಿಯ ನಿವೃತ್ತ ಅಧಿಕಾರಿಗಳು, ಸರ್ಕಾರಿ ಉದ್ಯೋಗಿಗಳೂ ಆಗಿರುವ ಉಮೇಶ್ ಕಾಂಚನ್, ಚಿತ್ತರಂಜನದಾಸ್ ಹೆಗ್ಡೆ, ಬಿ.ಡಿ.ಶೆಟ್ಟಿ, ಎಲ್. ಆರ್. ಬಂಗೇರ, ವಿಶ್ವನಾಥ ಹೆಗ್ಡೆ ಸಂಜೀವ ಗಾಣಿಗ ಮುಂತಾದ ಸಾಕಷ್ಟು ಮಂದಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಈ ಅಸಹ್ಯ ತ್ಯಾಜ್ಯ ತಂದು ಹಾಕುವ ಕಾರ್ಮಿಕರನ್ನು ಕೇಳಿದರೆ, ನಮಗೆ ಕಾಂಟ್ರಾಕ್ಟುದಾರರು ಹೇಳಿದ್ದಾರೆ ಎನ್ನುತ್ತಾರೆ.
ಕಾಂಟ್ರಾಕ್ಟುದಾರ ಯಾರು  ಮೊಬೈಲ್ ನಂಬರು ಕೋಡಿ ಎಂದು ಕೇಳಿದರೆ ಗೊತ್ತಿಲ್ಲ ಎನ್ನುತ್ತಾರೆ. ನಗರಸಭೆ ಆಯುಕ್ತರನ್ನು ಕೇಳೋಣ ಎಂದರೆ ಅವರು ರಜೆಯ ಮೇಲೆ ಊರಿಗೆ ಹೋಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement