ಗುಂಪುಗಾರಿಕೆ ನಡೆಸುವ ವೈದ್ಯರ ಮೇಲೆ ಕ್ರಮ
ಉಡುಪಿ: ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಗುಂಪುಗಾರಿಕೆ ನಡೆಸುವುದನ್ನು, ಕರ್ತವ್ಯದ ಅವಧಿಯಲ್ಲಿ ಗೈರು ಹಾಜರಾಗುವುದನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಉಡುಪಿ ಜಿಲ್ಲಾಸ್ಪತ್ರೆಗೆ ಧಿಡೀರ್ ಭೇಟಿ ನೀಡಿದ ಸಚಿವರು, ನಿರ್ದಿಷ್ಟವಾಗಿ ಉಡುಪಿ ಜಿಲ್ಲಾಸ್ಪತ್ರೆಯ ಬಗ್ಗೆ ಮಾತನಾಡುತ್ತಾ, ಉಡುಪಿ ಶಾಸಕರು ಉಡುಪಿ ಜಿಲ್ಲಾಸ್ಪತ್ರೆಯ ವೈದ್ಯರ ನಡುವೆ ಗುಂಪುಗಾರಿಕೆ ಇರುವುದನ್ನು ತನ್ನ ಗಮನಕ್ಕೆ ತಂದಿದ್ದಾರೆ, ಗುಂಪುಗಾರಿಕೆ, ಸ್ವಪ್ರತಿಷ್ಠೆಗಳನ್ನೆಲ್ಲಾ ಬಿಟ್ಟು ರೋಗಿಗಳ ಸೇವೆ ಮಾಡಿ ಎಂದು ಕಿವಿಮಾತು ಹೇಳಿದರು.
ಜೊತೆಗೆ ಸರ್ಕಾರಿ ಉದ್ಯೋಗ ಬಯಸುವ ವೈದ್ಯರು ಕಡ್ಡಾಯವಾಗಿ 2 ವರ್ಷಗಳ ಕಾಲ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲೇಬೇಕು, ಗ್ರಾಮೀಣ ಪ್ರದೇಶದಲ್ಲಿ ವೈದ್ಯರಿಗೆ ಅನೇಕ ರೀತಿಯ ಅನನುಕೂಲತೆಗಳಿವೆ ನಿಜ, ಅದಕ್ಕಾಗಿಯೇ ಸರ್ಕಾರಿ ವೈದ್ಯರ ವೇತನವನ್ನು ದುಪ್ಪಟ್ಟಿಗೂ ಹೆಚ್ಚು ಏರಿಸಲಾಗಿದೆ. ಇನ್ನೂ ಏನಾದರೂ ಸಮಸ್ಯೆಗಳಿದ್ದರೇ ಖಂಡಿತಾ ಅವುಗಳನ್ನು ಬಗೆಹರಿಸಲಾಗುವುದು. ಆದರೆ ಗ್ರಾಮೀಣ ಪ್ರದೇಶದಲ್ಲಿ 2 ವರ್ಷ ಕಡ್ಡಾಯ ಸೇವೆ ಸಲ್ಲಿಸಲೇಬೇಕು ಎಂದವರು ಹೇಳಿದರು.
ಸರ್ಕಾರಿ ಆಸ್ಪತ್ರೆಯ ವೈದ್ಯರು ರೋಗಿಗಳೊಂದಿಗೆ ವರ್ತನೆಯನ್ನು ತಿದ್ದಿಕೊಳ್ಳಬೇಕು, ಬಡರೋಗಿಗಳ ಬಗ್ಗೆ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ರೋಗಿಗಳಿಗೆ ಉಚಿತ ಔಷಧಿ ಒದಗಿಸುವ ಪೂರಾ ಪ್ರಯತ್ನ ಮಾಡಬೇಕು, ಸರ್ಕಾರಿ ವೈದ್ಯರೆಂದರೆ ಕೇವಲ ಔಷಧಿ ಕೋಡುವುದಕ್ಕೆ ಸೀಮಿತರಲ್ಲ, ಸರ್ಕಾರ ಬಡರೋಗಿಗಳಿಗಾಗಿ ಜಾರಿಗೊಳಿಸಿದ ಎಲ್ಲ ಯೋಜನೆಗಳ ಪ್ರಯೋಜನ ಒದಗಿಸಬೇಕು ಎಂದು ಸಚಿವರು ಹೇಳಿದರು.
ಉಡುಪಿ ಸರ್ಕಾರಿ ಆಸ್ಪತ್ರೆ ಇನ್ನೂ ತಾಲೂಕು ಶ್ರೇಣಿಯಲ್ಲಿರುವುದರಿಂದ ಅದನ್ನು ಜಿಲ್ಲಾಸ್ಪತ್ರೆ ದರ್ಜೆಗೇರಿಸಲು ಯೋಚಿಸಲಾಗಿದೆ. ಇಲ್ಲಿ ಕೊರತೆ ಇರುವ ವೈದ್ಯರು ಮತ್ತು ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಗುವುದು ಎಂದವರು ಹೇಳಿದರು.
ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯರಿ ಸಚಿವರೊಂದಿಗಿದ್ದರು. ಇದಕ್ಕೆ ಮೊದಲು ಸಚಿವರು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಆಶ್ರಯದಲ್ಲಿ ಮಣಿಪಾಲ ವಿವಿಯ ವತಿಯಿಂದ ಆರೋಗ್ಯ ಕಾರ್ಡು ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ್ದರು.