ನಿಟ್ಟೆ: ಉದ್ಯಮಶೀಲತಾ ತರಬೇತಿ ಶಿಬಿರ ಉದ್ಘಾಟನೆ
ನಿಟ್ಟೆ: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಎಂಜಿನಿಯರಿಂಗ್ ಕಾಲೇಜಿನ ಉದ್ಯಮಶೀಲತಾ ಅಭಿವೃದ್ಧಿ ಘಟಕ ಮತ್ತು ಸ್ಟೆಪ್ ವತಿಯಿಂದ ನಿಟ್ಟೆ ಸಿಎನ್‌ಸಿ ಲೇತ್ ಮತ್ತು ಮಿಲ್ಲಿಂಗ್ ಮೆಷಿನ್ ಅಪರೇಷನ್, ಪ್ರೋಗ್ರಾಮಿಂಗ್ ಮತ್ತು ಮೈಂಟೆನೆನ್ಸ್ ಒಂದು ತಿಂಗಳ ಉಚಿತ ತರಬೇತಿ ಶಿಬಿರ ಸೋಮವಾರ ಆರಂಭವಾಯಿತು.
ಶಿಬಿರ ಉದ್ಘಾಟಿಸಿದ ಕಾರ್ಕಳ ಮೈತ್ರಿ ಇಂಡಸ್ಟ್ರೀಸ್‌ನ ಮಾಲೀಕ ಪ್ರಭಾಕರ ಶೆಟ್ಟಿ ಮಾತನಾಡಿ, ತರಬೇತಿ ಕಾರ್ಯಕ್ರಮಗಳು ಪ್ರಸ್ತುತ ತಾಂತ್ರಿಕತೆಯಲ್ಲಿನ ನೈಪುಣ್ಯತೆ ಪಡೆಯಲು ಸಹಕಾರಿ ಎಂದರು.
ತಾನು ತನ್ನ ಸ್ವಂತ ಉದ್ದಿಮೆ ಸ್ಥಾಪಿಸುವಲ್ಲಿ ಹಾಗೂ ಅದರ ಬೆಳವಣಿಗೆಯಲ್ಲಿ ಪಡೆದುಕೊಂಡ ಅನುಭವವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ತೋಕೂರು ಎಂ.ಆರ್. ಪೂಂಜ ಐ.ಟಿ.ಐ. ಪ್ರಾಂಶುಪಾಲ ವೈ.ಎನ್. ಸಾಲ್ಯಾನ್ ಮಾತನಾಡಿ, ವಿದ್ಯಾರ್ಥಿಗಳು ಇಂತಹ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಅದು ಸ್ವಂತ ಉದ್ದಿಮೆ ಸ್ಥಾಪಿಸುವಲ್ಲಿ ಸಹಕಾರಿಯಾಗುವುದಲ್ಲದೆ, ನಮ್ಮ ವೃತ್ತಿ ಜೀವನದಲ್ಲಿ ಕೂಡ ಬಹಳಷ್ಟು ಎತ್ತರಕ್ಕೆ ತಲುಪಲು ಸಹಾಯಕ ಎಂದು ಹೇಳಿದರು.
ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಲೋಣ್ಕರ್ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಶೀಲತಾ ಅಭಿವೃದ್ಧಿ ಘಟಕದ ನಿಯೋಜಕ ಡಾ. ಉದಯಕುಮಾರ್ ಸ್ವಾಗತಿಸಿದರು. ಉದ್ಯಮಶೀಲತಾ ಅಭಿವೃದ್ಧಿ ಘಟಕದ ಮುಖ್ಯಸ್ಥ, ಕಾಲೇಜಿನ ಉಪಪ್ರಾಂಶುಪಾಲ ಡಾ.ಐ.ಆರ್. ಮಿತ್ತಂತಾಯ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು.
ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಸುಬ್ರಹ್ಮಣ್ಯ ಭಟ್ ವಂದಿಸಿದರು. ಗೀತಾ ನಿರೂಪಿಸಿದರು.