ವಿಮಾ ಕಾಯ್ದೆ ತಿದ್ದುಪಡಿ ವಿರೋಧಿಸಲು ಸಂಸದಗೆ ಮನವಿ
ಉಡುಪಿ: ಡಿ.5ರಿಂದ ಆರಂಭಗೊಳ್ಳಲಿರುವ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪವಾಗಲಿರುವ ವಿಮಾ ಕಾಯ್ದೆ ತಿದ್ದುಪಡಿ ವಿರೋಧಿಸುವಂತೆ ಉಡುಪಿ-ಚಿಕ್ಕಮಗಳೂರು ಸಂಸದ ಕೆ. ಜಯಪ್ರಕಾಶ ಹೆಗ್ಡೆ ಅವರನ್ನು ವಿಮಾ ನೌಕರರ ಸಂಘದ ಉಡುಪಿ ವಿಭಾಗ ಆಗ್ರಹಿಸಿದೆ. ಸಂಘದ ನಿಯೋಗ ಇತ್ತೀಚೆಗೆ ಸಂಸದರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಸಲ್ಲಿಸಿದೆ.
ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ವಿಮಾ ಕ್ಷೇತ್ರದ ಬಗ್ಗೆ 3 ಪ್ರಮುಖ ಕಾನೂನುಗಳಿಗೆ ತಿದ್ದುಪಡಿ ತರುವ ಬಗ್ಗೆ ಆಲೋಚಿಸುತ್ತಿದೆ. ಈ ಮೂಲಕ ಭಾರತದ ಹೆಮ್ಮೆಯ ವಿಮಾ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮವನ್ನು ಬಲಹೀನಗೊಳಿಸಲು ಸರ್ಕಾರವೇ ಪ್ರಯತ್ನಿಸುತ್ತಿದೆ. ಈ ತಿದ್ದುಪಡಿಯಂತೆ, ಈಗಾಗಲೇ ಜೀವ ವಿಮಾ ನಿಗಮದಲ್ಲಿರುವ ವಿದೇಶಿ ನೇರ ಬಂಡವಾಳವನ್ನು ಶೇ. 26ರಿಂದ 49ಕ್ಕೆ ಏರಿಸುವುದರಿಂದ ದೇಶದ ಆಂತರಿಕ ಉಳಿತಾಯದ ಮೇಲೆ ವಿದೇಶಿಯರಿಗೆ ಮತ್ತು ಖಾಸಗಿ ಬಂಡವಾಳ ಶಾಹಿಗಳಿಗೆ ಇನ್ನಷ್ಟು ಹಿಡಿತ ಸಾಧಿಸಲು ಅವಕಾಶ ಕಲ್ಪಿಸಿದಂತಾಗುತ್ತದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಆದ್ದರಿಂದ ಈ ತಿದ್ದಪಡಿಯನ್ನು ಅಧಿವೇಶನದಲ್ಲಿ ವಿರೋಧಿಸುವಂತೆ ಸಂಸದರನ್ನು ಮನವಿಯಲ್ಲಿ ಆಗ್ರಹಿಸಲಾಗಿದೆ.
ಎಲ್ಲ ಸಂಸದರ ಸಂಪರ್ಕ: ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೆಚ್ಚಳ ಮತ್ತು ಭಾರತೀಯ ಜೀವ ವಿಮಾ ನಿಗಮದ ಖಾಸಗೀಕರಣದ ಪ್ರಯತ್ನಗಳನ್ನು ವಿರೋಧಿಸಿ ನಿಗಮದಲ್ಲಿ ದುಡಿಯುತ್ತಿರುವ ಕಾರ್ಮಿಕ ಸಂಘಟನೆಯಾದ ಅಖಿಲ ಭಾರತ ವಿಮಾ ನೌಕರರ ಸಂಘವು ಪಕ್ಷತೀತವಾಗಿ ದೇಶದ ಎಲ್ಲಾ ಸಂಸತ್ ಸದಸ್ಯರನ್ನು ಸಂಪರ್ಕಿಸಿ ಈ ಮನವಿ ಮಾಡುತ್ತಿದೆ. ಮನವಿ ಸ್ವೀಕರಿಸಿದ ಸಂಸದರು ಸಂಸತ್ತಿನಲ್ಲಿ ಈ ವಿಷಯದ ಬಗ್ಗೆ ಚರ್ಚಿಸುವುದಾಗಿ ಆಶ್ವಾಸನೆ ನೀಡಿದರು.
ಈ ನಿಯೋಗದಲ್ಲಿ ವಿಮಾ ನೌಕರರ ಸಂಘದ ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ಯು. ಗುರುದತ್, ಅಧ್ಯಕ್ಷ ಕೆ. ವಿಶ್ವನಾಥ, ಮಹಿಳಾ ಸಂಚಾಲಕಿ ನಿರ್ಮಲ, ಭಾ.ಜೀ.ವಿ.ನಿಗಮದ ಅಭಿವೃದ್ಧಿ ಅಧಿಕಾರಿಗಳ ಸಂಘದ ಪದಾಧಿಕಾರಿ ಮುನ್ನಾ ರಾವ್ ಹಾಗೂ ಕಿಶೋರ್ ಕುಮಾರ್ ಶೆಟ್ಟಿ ಇದ್ದರು.
--
ಅಪರಿಚಿತ ವ್ಯಕ್ತಿ ಶವ ಪತ್ತೆ
ಗಂಗೊಳ್ಳಿ: ಇಲ್ಲಿನ ತ್ರಾಸಿ ಗ್ರಾಮದ ಪಂಚಗಂಗಾವಳಿ ಹೊಳೆಯಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಸುಮಾರು 55 ವರ್ಷ ವಯಸ್ಸಿನ ಈ ವ್ಯಕ್ತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಶವವು ಕೊಳೆತ ಸ್ಥಿತಿಯಲ್ಲಿದ್ದು, ಕಪ್ಪು ಬಣ್ಣದ ದೊಗಲೆ ಚಡ್ಡಿ ಇದೆ. ಗುಜ್ಜಾಡಿ ಗ್ರಾಮದ ಭಾಸ್ಕರ ಪೂಜಾರಿ ಎಂಬವರ ಹೇಳಿಕೆಯಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೈವಸ್ಥಾನದಲ್ಲಿ ಕಳ್ಳತನ
ಗಂಗೊಳ್ಳಿ: ಇಲ್ಲಿನ ಹರ್ಕೂರು ಗ್ರಾಮದ ದೈವಸ್ಥಾನವೊಂದರಲ್ಲಿ ಕಳ್ಳತನ ಘಟನೆ ನಡೆದಿದೆ. ಇಲ್ಲಿನ ನಡುಬೆಟ್ಟು ಎಂಬಲ್ಲಿರುವ ನಂದಿಕೇಶ್ವರ ದೈವಸ್ಥಾನದಲ್ಲಿ ಪಾತ್ರಿ ಪ್ರದೀಪ ಶೆಟ್ಟಿ ಭಾನುವಾರ ರಾತ್ರಿ ಪೂಜೆ ಮುಗಿಸಿ ಬಾಗಿಲಿಗೆ ಬೀಗ ಹಾಕಿ ಮನೆಗೆ ಹೋಗಿದ್ದು, ಸೋಮವಾರ ಬೆಳಗ್ಗೆ 6.30ಕ್ಕೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ದೈವಸ್ಥಾನದ ಬೀಗ ಮುರಿದು ದೇವರ ಎದುರು ಇದ್ದ ಕಾಣಿಕೆ ಡಬ್ಬಿ ಅಪಹರಿಸಿ, ದೈವಸ್ಥಾನದ ಸ್ವಲ್ಪ ದೂರದಲ್ಲಿ ಕಾಣಿಕೆ ಡಬ್ಬಿಯ ಬೀಗ ಮುರಿದು ಅದರಲ್ಲಿ ಇದ್ದ ಸುಮಾರು ರು. 24000 ಕಳವು ಮಾಡಿರುವುದು ಪತ್ತೆಯಾಗಿದೆ. ದೈವಸ್ಥಾನದ ಮೊಕ್ತೇಸರ ಚಂದ್ರಶೇಖರ ಶೆಟ್ಟಿ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.