ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಕಟ್ಟಡ ನಿರ್ವಹಣೆ ಗುತ್ತಿಗೆ ಅನಾವಶ್ಯಕ; ಆಕ್ಷೇಪ

Vishwanath S
Updated On : 5 Dec 2013, 11:20 am

ಕಾರ್ಕಳ: ಅನಾವಶ್ಯಕವಾಗಿ ವಾಣಿಜ್ಯ ಸಂಕೀರ್ಣ ನಿರ್ವಹಣೆ ಗುತ್ತಿಗೆ ನೀಡುವ ಮೂಲಕ ಪುರಸಭೆ ಖಜಾನೆ ಪೋಲಾಗುತ್ತಿದೆ ಎಂದು ಪುರಸಭಾ ಆಡಳಿತ ಪಕ್ಷದ ಸದಸ್ಯ ನವೀನ್ ದೇವಾಡಿಗ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪುರಸಭಾ ಅಧ್ಯಕ್ಷೆ ರಹಮತ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ನವೀನ್ ದೇವಾಡಿಗ, ಇಂದಿರಾಗಾಂಧಿ ಮಾರುಕಟ್ಟೆ ವಾಣಿಜ್ಯ ಸಂಕೀರ್ಣದ ನೈರ್ಮಲ್ಯ ನಿರ್ವಹಣೆ ಬಗ್ಗೆ ಮರು ಟೆಂಡರ್ ನಡೆದಿದೆ ಎಂದರು.
ವಾರ್ಷಿಕವಾಗಿ ರು. 5,76,000 ದರ ಪಟ್ಟಿಯಲ್ಲಿ ಗುತ್ತಿಗೆದಾರರು ಪುರಸಭೆಗೆ ನೀಡಿದ್ದರು. ಗುತ್ತಿಗೆ ಮಂಜೂರಿಗೆ ಸಿದ್ಧತೆ ನಡೆಯುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನೈರ್ಮಲ್ಯದ ನಿರ್ವಹಣೆಗೆ ಪ್ರತಿ ತಿಂಗಳು ರು. 48,000 ವೆಚ್ಚವಾಗುತ್ತಿದೆ. ಈಗಾಗಲೇ ಪುರಸಭೆಯ ನೈರ್ಮಲ್ಯ ವಿಭಾಗದ ಇಬ್ಬರು ಸಿಬ್ಬಂದಿ ಮಾರುಕಟ್ಟೆ ನೈರ್ಮಲ್ಯ ಕಾಪಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಅನಾವಶ್ಯಕವಾಗಿ ಗುತ್ತಿಗೆ ನೀಡುವ ಮೂಲಕ ಪುರಸಭಾ ಖಜಾನೆ ಪೋಲಾಗುತ್ತಿದೆ. ಇದನ್ನು ಉಳಿಸಿದರೆ ವಾರ್ಷಿಕ ವೆಚ್ಚ ರು.  5,76,000 ನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದರು.
ಸಂಬಳವಾಗದೆ ತಿಂಗಳಾಯಿತು: ದುಡಿದ ಸಿಬ್ಬಂದಿಗೆ ಸಂಬಳವಾಗದೆ ತಿಂಗಳು ಕಳೆದಿದೆ. ಹೆಚ್ಚುವರಿಯಾಗಿ ಪೋಲಾಗುತ್ತಿರುವ ದುಂದುವೆಚ್ಚ ತಡೆಗಟ್ಟಿ ಅದನ್ನು ದುಡಿಯುವ ಸಿಬ್ಬಂದಿ ಸಂಬಳಕ್ಕೆ ವ್ಯಯಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯಾಧಿಕಾರಿ ಮೇಬಲ್ ಡಿ' ಸೋಜಾ ಮಾತನಾಡಿ, ಸದಸ್ಯರು ಸಭಾ ಶಿಷ್ಟಾಚಾರ ಗೌರವಿಸುವುದನ್ನು ಕಲಿಯಬೇಕು. ಸಾಮಾನ್ಯ ಸಭೆಯ ಹತ್ತು ದಿನಗಳ ಮುಂಚಿತವಾಗಿ ಲಿಖಿತವಾಗಿ ಪ್ರಶ್ನೆ ಕೇಳಬೇಕಾಗುತ್ತದೆ ಎಂದರು.
ಗುಜರಿ ಮಾರಾಟ ಹಣ ಎಲ್ಲಿ...?: ಪುರಸಭೆ ಅಧೀನದಲ್ಲಿರುವ ಅನೇಕ ಪರಿಕರಗಳು ಗುಜರಿಯಾಗಿದ್ದರೂ, ಅದರ ಲೆಕ್ಕಚಾರ ಇನ್ನೂ ಸಭೆಯ ಗಮನಕ್ಕೆ ತರುವುದಿಲ್ಲ. ಗುಜರಿ ಸಾಮಗ್ರಿ ಮಾರಾಟವಾಗುತ್ತಿರುವುದರಿಂದ ಪುರಸಭೆಗೆ ಬರುವಂತಹ ಅದಾಯ ಯಾರ ಕಿಸೆ ಸೇರಿದೆ ಎಂದು ಆಡಳಿತ ಪಕ್ಷದ ಸದಸ್ಯ ನವೀನ್ ದೇವಾಡಿಗ ಪ್ರಶ್ನಿಸಿದರು.
ಉಪಾಧ್ಯಕ್ಷೆ ಶಶಿಕಲಾ ರಾಣೆ, ಸ್ಥಾಯಿ ಸಮಿತಿ ಅಧ್ಯಕ್ಷ ವಿನ್ನಿಬೋಲ್ಡ್ ಮೆಡೋನ್ಸಾ, ಪುರಸಭಾ ಮುಖ್ಯಾಧಿಕಾರಿ ಮೇಬಲ್ ಡಿ' ಸೋಜಾ ಇದ್ದರು.
ಇಂಟರ್‌ನೆಟ್ ತಿಂಗಳ ಬಿಲ್ ರು. 41 ಸಾವಿರ!
ಸರ್ಕಾರಿ ಕೆಲಸಕ್ಕೆಂದು ಪುರಸಭೆಯಲ್ಲಿ ಇಂಟರ್‌ನೆಟ್ ಬಳಸಲಾಗುತ್ತಿದೆ. ತಿಂಗಳೊಂದರ ಬಿಲ್ ರು. 41,000 ವನ್ನು ಕಾರ್ಕಳ ಪುರಸಭೆ ಪಾವತಿಸಿದೆ. ಇಷ್ಟೊಂದು ಬಿಲ್ ಯಾಕಾಗಿ ಬಂತು ಎಂಬ ಬಗ್ಗೆ ಸಂಬಂಧಪಟ್ಟವರು ಯೋಚಿಸದೆ ಬಿಲ್ ಪಾವತಿಸಿರುವುದು ಹೇಗೆ? ಎಂದು ಆಡಳಿತ ಪಕ್ಷದ ಸದಸ್ಯ ಅಶ್ಫಕ್ ಅಹಮ್ಮದ್ ಪ್ರಶ್ನಿಸಿದರು. ರಜಾ ದಿನಗಳಲ್ಲಿ ಇಂಟರ್‌ನೆಟ್ ಉಪಯೋಗಿಸಿರುವ ಅಂಶ ಬೆಳಕಿಗೆ ಬಂದಿದೆ. ರಜಾ ದಿನಗಳಲ್ಲಿ ಇಂಟರ್‌ನೆಟ್ ಬಳಸಿರುವ ಅಗತ್ಯ ಏನು ಎಂದು ಪ್ರಶ್ನಿಸಿದ ಅವರು, ಅನ್ ಲಿಮಿಟೆಡ್ ಪ್ಲಾನ್ ವ್ಯವಸ್ಥೆ ಇರುವಾಗ ಅದನ್ನು ಕಚೇರಿಯ ಕೆಲಸಕ್ಕೆ ಬಳಸುವ ಮೂಲಕ ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement