ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ನಿರ್ಮಲ ಗ್ರಾಮ ರೂಪಿಸಲು ಸಂಘಟಿತ ಪ್ರಯತ್ನ ಅಗತ್ಯ: ಉಪೇಂದ್ರ ನಾಯಕ್

Vishwanath S
Updated On : 5 Dec 2013, 11:20 am

ಉಡುಪಿ; ಜಿಲ್ಲಾ ಕೇಂದ್ರದಿಂದ ಅತಿ ದೂರದಲ್ಲಿರುವ ಕೆರಾಡಿ ಗ್ರಾ.ಪಂ. ತೀರಾ ಗ್ರಾಮೀಣ ಪ್ರದೇಶವಾಗಿದ್ದು ಶೌಚಾಲಯ ಬಳಕೆಯಲ್ಲಿ ಬಹಳ ಹಿಂದುಳಿದಿದೆ. ಆದ್ದರಿಂದ ಪ್ರತಿ ಕುಟುಂಬವೂ ಶೌಚಾಲಯ ನಿರ್ಮಿಸುವುದು ಅಗತ್ಯವಾಗಿದ್ದು, ಸ್ಥಳೀಯ ಸಂಘ ಸಂಸ್ಥೆಗಳು, ಸ್ವಸಹಾಯ ಸಂಘಗಳು, ಜನಪ್ರತಿನಿಧಿಗಳು ಕೆರಾಡಿ ಗ್ರಾಮವನ್ನು ನಿರ್ಮಲ ಗ್ರಾಮವನ್ನಾಗಿಸಲು ಒಟ್ಟಾಗಿ ಶ್ರಮಿಸಬೇಕೆಂದು ಜಿ.ಪಂ. ಅಧ್ಯಕ್ಷ ಉಪೇಂದ್ರ ನಾಯಕ್ ಕರೆ ನೀಡಿದ್ದಾರೆ.
ಮಂಗಳವಾರ ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಜಿ.ಪಂ. ವತಿಯಿಂದ ಕೆರಾಡಿ ಗ್ರಾ.ಪಂ. ಆಶ್ರಯದಲ್ಲಿ ಕೆರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಸ್ವಚ್ಛತಾ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿ.ಪಂ.ನ ಸಹಾಯಕ ಯೋಜನಾಧಿಕಾರಿ ಉದಯ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ, 2012ರ ಬೇಸ್‌ಲೈನ್ ಎಂಬ ಸಮೀಕ್ಷೆ ಪ್ರಕಾರ ಕೆರಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ 569 ಕುಟುಂಬಗಳು ಶೌಚಾಲಯ ರಹಿತವಾಗಿವೆ. ಇವುಗಳಲ್ಲಿ ಬಿಪಿಎಲ್ ಹಾಗೂ ಎಪಿಎಲ್ ನಿರ್ಬಂಧಿತ ಕುಟುಂಬಗಳಿಗೆ ನಿರ್ಮಲ ಭಾರತ್ ಅಭಿಯಾನ ಹಾಗೂ ಉದ್ಯೋಗ ಖಾತ್ರಿ ಯೋಜನೆಗಳ ಮೂಲಕ ಸರ್ಕಾರದಿಂದ ರು. 9200 ಪ್ರೋತ್ಸಾಹಧನ ನೀಡಲಾಗುವ ಬಗ್ಗೆ ಮಾಹಿತಿ ನೀಡಿದರು.
ಸ್ವಚ್ಛತಾ ಉತ್ಸವದ ಅಂಗವಾಗಿ ಗ್ರಾ.ಪಂ. ವ್ಯಾಪ್ತಿಯ ಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಸ್ವಚ್ಛತೆಯ ಬಗ್ಗೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಿರ್ಮಲ ಭಾರತ್ ಅಭಿಯಾನದಡಿ ಸಾಂಕೇತಿಕವಾಗಿ 5 ಮಂದಿ ಫಲಾನುಭವಿಗಳಿಗೆ ಪ್ರೋತ್ಸಾಹಧನದ ಚೆಕ್ ವಿತರಿಸಲಾಯಿತು.
ಕೆರಾಡಿ ಗ್ರಾ.ಪಂ. ಅಧ್ಯಕ್ಷೆ ಸರೋಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಉಪಾಧ್ಯಕ್ಷೆ ಮಮತಾ ಆರ್. ಶೆಟ್ಟಿ, ನಿ.ಭಾ. ಅಭಿಯಾನದ ಜಿಲ್ಲಾ ಸಮಾಲೋಚಕ ಸುಧೀರ್ ಎ.ಕೆ, ಗ್ರಾ.ಪಂ. ಉಪಾಧ್ಯಕ್ಷ ಸುದರ್ಶನ ಶೆಟ್ಟಿ, ಶಾಲೆ ಮುಖ್ಯ ಶಿಕ್ಷಕ ಕರುಣಾಕರ ಶೆಟ್ಟಿ ಇದ್ದರು.
ಗ್ರಾಮ ಪಂಚಾಯಿತಿ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಪ್ರಭಾರ ಪಿಡಿಒ ರಮೇಶ್ ವಂದಿಸಿದರು. ಬೆಳ್ಳಾಲ ಶಾಲೆ ಮುಖ್ಯ ಶಿಕ್ಷಕ ನಾರಾಯಣ ಕೊಠಾರಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement