ಉಡುಪಿ: ನಾಳೆ ಭಾರತ ನಿರ್ಮಾಣ ಸೇವಕರ ಸಮಾವೇಶ
ಉಡುಪಿ: ಭಾರತ ನಿರ್ಮಾಣ ಸೇವಕರ ತಾಲೂಕು ಮಟ್ಟದ ಸಮಾವೇಶವು 8 ರಂದು ಬೆಳಗ್ಗೆ 10 ಗಂಟೆಗೆ ಅಂಬಲಪಾಡಿಯ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ಜರಗಲಿದೆ ಎಂದು ನವಭಾರತ ನಿರ್ಮಾಣ ವೇದಿಕೆ ಉಡುಪಿ ತಾಲೂಕು ಒಕ್ಕೂಟದ ಅಧ್ಯಕ್ಷೆ ಮಲ್ಲಿಕಾ ಬಿ. ಪೂಜಾರಿ ಐರೋಡಿ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ತಾಲೂಕಿನ ಸ್ವಯಂ ಸೇವಕರನ್ನು ಸಂಘಟಿಸಿ ಅವರಿಗೆ ನೈತಿಕ ಸ್ಥರ್ಯವನ್ನು ತುಂಬುವುದರ ಜೊತೆಗೆ ಜನಪ್ರತಿನಿಧಿಗಳಿಗೆ ಸ್ವಯಂ ಸೇವಕರ ನೇರ ಸಂಪರ್ಕವನ್ನು ಕಲ್ಪಿಸುವ ಉದ್ದೇಶದಿಂದ ನಡೆಯಲ್ಪಡುವ ಈ ಕಾರ್ಯಕ್ರಮದಲ್ಲಿ ಉಡುಪಿ ತಾಲೂಕಿನಿಂದ ಸುಮಾರು 700 ಸ್ವಯಂ ಸೇವಕರು ಭಾಗವಹಿಸುವ ನಿರೀಕ್ಷೆ ಇದೆ ಹಾಗೂ ಜನಪ್ರತಿನಿಧಿಗಳು ಮತ್ತು ಇಲಾಖಾ ಅಧಿಕಾರಿಗಳು ಭಾಗವಹಿಸಲಿರುವರು ಎಂದರು.
ಸಮಾವೇಶದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಶಾಸಕ ಪ್ರಮೋದ್ ಮಧ್ವರಾಜ್ ವಹಿಸಲಿದ್ದಾರೆ. ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ತಾಲೂಕು ಮಟ್ಟದ ನವ ಭಾರತ ನಿರ್ಮಾಣ ವೇದಿಕೆಯ ಉದ್ಘಾಟಿಸಲಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಕೆ.ಆರ್. ಪಾಟ್ಕರ್ ಶಿರ್ವ ಮತ್ತು ದಿನೇಶ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ರಾಜೇಶ್ ದೇವಾಡಿಗ ಪಡುಬಿದ್ರಿ, ಕೋಶಾಧಿಕಾರಿ ಹರೀಶ್ ಕಿಣಿ ಅಲೆವೂರು ಹಾಗೂ ತಾಲೂಕು ಸಂಯೋಜಕಿ ನವ್ಯ ಇದ್ದರು.