ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಭವ್ಯ ಮೆರವಣಿಗೆ; ಕಟೀಲು ಶ್ರೀದೇವಿಗೆ ಧ್ವಜಸ್ತಂಭ ಮರ ಸಮರ್ಪಣೆ

Vishwanath S
Updated On : 7 Dec 2013, 11:25 am

ಮೂಲ್ಕಿ:  ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಕೊಡೆತ್ತೂರು ಮಾಗಂದಡಿ ಕುಟುಂಬಿಕರಿಂದ ಅರ್ಪಿಸಲ್ಪಟ್ಟ ಧ್ವಜಸ್ತಂಭ (ಕೊಡಿಮರ)ದ ತೇಗದ ಮರವನ್ನು ಮೂಲ್ಕಿಯಿಂದ ಕಿನ್ನಿಗೋಳಿ ಮೂರುಕಾವೇರಿ ಕಟೀಲು ಮೂಲಕ ಮೆರವಣಿಗೆಯಲ್ಲಿ ಸಾಗಿ ಕಟೀಲು ದೇವಳಕ್ಕೆ ಅರ್ಪಿಸಲಾಯಿತು.
ಸುಳ್ಯದ ಉಬರಡ್ಕದ ರಾವ್ ಮೋಹನ್ ತೋಟದಿಂದ ತೇಗದ ಮರವನ್ನು ವಾಹನದಲ್ಲಿ ಮೂಲ್ಕಿಗೆ ತಂದು ಬಳಿಕ ಮೂಲ್ಕಿಯಿಂದ ಮೆರವಣಿಗೆಯಲ್ಲಿ ಸಾಗಿಸಲಾಯಿತು.
ಮೂಲ್ಕಿಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಮೆರವಣಿಗೆಗೆ ಚಾಲನೆ ನೀಡಿದರು. ಕೊಡೆತ್ತೂರು ಮಾಗಂದಡಿ ಕುಟಂಬದ ಯಜಮಾನ ರಾಮಕೃಷ್ಣ ಶೆಟ್ಟಿ, ಮೂಲ್ಕಿ ಕಾರ್ನಾಡು ಹರಿಹರ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಎಚ್. ಅರವಿಂದ ಪೂಂಜ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಇದ್ದರು.
ಗುರುವಾರ ಹೊರಟ ಮೆರವಣಿಗೆ ಪುತ್ತೂರು, ಬಂಟ್ವಾಳ, ಮಂಗಳೂರು ಮೂಲ್ಕಿ ತಲುಪಿ, ಶುಕ್ರವಾರ ಸಂಜೆ ಕಟೀಲಿಗೆ ತಲುಪಿತು.
ಸುಮಾರು ರು. 5 ಲಕ್ಷ ವೆಚ್ಚದ ಈ ಮರದಿಂದ ಮುಂದಿನ ಎರಡು ವರ್ಷದೊಳಗೆ ಹೊಸ ಧ್ವಜಸ್ತಂಭ ನಿರ್ಮಿಸಲಾಗುವುದು. ಈಗಿರುವ ಧ್ವಜಸ್ತಂಭವನ್ನು 1970ರಲ್ಲಿ ಪ್ರತಿಷ್ಠಾಪಿಸಲಾಗಿದ್ದು ಅದನ್ನು ಪುತ್ತೂರು ಪಾಣಾಜೆಯಿಂದ ತರಲಾಗಿತ್ತು.
ಈಗಿನದ್ದು ಬೆಳ್ಳಿಯ ಧ್ವಜಸ್ತಂಭವಾಗಿದ್ದು ಮುಂದಕ್ಕೆ ಹೊಸ ಧ್ವಜಸ್ತಂಭಕ್ಕೆ ಭಕ್ತರ ಸಹಕಾರದಿಂದ ಬೆಳ್ಳಿಯ ತಗಡಿಗೆ 4.5 ಕೆ.ಜಿ. ಚಿನ್ನ ಹೊದಿಸಲಾಗುವುದು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.
ದೇಗುಲದ ಆಡಳಿತಾಧಿಕಾರಿ ಕೃಷ್ಣಮೂರ್ತಿ, ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಆಸ್ರಣ್ಣ ಸಹೋದರರಾದ ಲಕ್ಷ್ಮೀನಾರಾಯಣ, ವೆಂಕಟರಮಣ, ಅನಂತಪದ್ಮನಾಭ, ಕಮಲಾದೇವಿ ಪ್ರಸಾದ, ಶ್ರೀಹರಿನಾರಾಯಣ, ಕುಮಾರ ಆಸ್ರಣ್ಣ, ಶಿಬರೂರು ವೇದವ್ಯಾಸ ತಂತ್ರಿ, ಕೊಡೆತ್ತೂರು ಮಾಗಂದಡಿ ಕುಟುಂಬದ ಪ್ರಮುಖರಾದ ಬಿ.ರಾಮಕೃಷ್ಣ  ಶೆಟ್ಟಿ, ಅತ್ತೂರು ಕೊಡೆತ್ತೂರು ಗ್ರಾಮಸ್ಥರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement