ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

2016- 17ರಲ್ಲಿ ಲೋಕಸಭಾ ಮರುಚುನಾವಣೆ: ರಾಕೇಶ್ ಶರ್ಮ

Lingaraj Badiger
Updated On : 9 Dec 2013, 10:52 am

ಉಡುಪಿ: ಮುಂದಿನ 2014ರಲ್ಲಿ ನಡೆಯುವ ಲೋಕಸಭಾ ಚುನಾವಣೆಯನ್ನು ಬಹಳ ದೊಡ್ಡ ನಿರ್ಣಾಯಕ ಚುನಾವಣೆ ಎಂದು ಬಿಂಬಿಸಲಾಗುತ್ತಿದೆ. ಆದರೆ, 2016 ಅಥವಾ 2017ರಲ್ಲಿಯೇ ಇನ್ನೊಮ್ಮೆ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆಗಳಿವೆ ಎಂದು ಸಾಕ್ಷ್ಯಚಿತ್ರ ನಿರ್ದೇಶಕ ರಾಕೇಶ್ ಶರ್ಮ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಇಲ್ಲಿನ ಹೂಡೆ ಗ್ರಾಮದ ಬೆಂಗ್ರೆ ಎಂಬಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಕೇಂದ್ರ ಸಮಿತಿ ಆಯೋಜಿಸಿದ್ದ 'ಗುಜರಾತ್ ಅಭಿವೃದ್ಧಿ ಮಾದರಿ ಮತ್ತು ಮೋದಿತ್ವ - ಎದುರಿಸಬೇಕಾದ ಸವಾಲುಗಳು ಮತ್ತು ರೂಪಿಸಬೇಕಾದ ಕಾರ್ಯತಂತ್ರಗಳು' ಎಂಬ ರಾಜ್ಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಾಗಲಿ, ಕಾಂಗ್ರೆಸ್ ಪಕ್ಷವಾಗಲಿ ಬಹುಮತ ಪಡೆಯುವುದಿಲ್ಲ. ಬಿಜೆಪಿ 300 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಆದರೆ, ಹಿಂದೆ ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ಗಳಿಸಿದ್ದ 180 ಸ್ಥಾನಗಳನ್ನೂ ಈ ಬಾರಿ ಮೋದಿ ನೇತೃತ್ವದಲ್ಲಿ ಗಳಿಸುವುದಿಲ್ಲ. ಇನ್ನು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದಿಂದ ರೋಸಿರುವ ಜನರು ಅದಕ್ಕೆ ಮತ್ತೆ ಅಧಿಕಾರ ನೀಡುವುದಿಲ್ಲ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಂತೆ, ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗವು ಸಾಕಷ್ಟು ಮತಗಳನ್ನು ಪಡೆಯಬಹುದು. ಆದರೆ, ಅದಕ್ಕೂ ಅಧಿಕಾರಕ್ಕೇರುವಷ್ಟು ಸ್ಥಾನಗಳು ದೊರೆಯುವುದಿಲ್ಲ. ಸದ್ಯದ ರಾಜಕೀಯ ಸ್ಥಿತಿಗತಿಯಲ್ಲಿ ಯಾವುದೇ ಮೈತ್ರಿ ಸರ್ಕಾರ ಹೆಚ್ಚು ಕಾಲ ಉಳಿಯುವ ಸಾಧ್ಯತೆಗಳಿಲ್ಲ. ಆದ್ದರಿಂದ ಒಂದೆರಡು ವರ್ಷಗಳಲ್ಲಿ ಮತ್ತೊಮ್ಮೆ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಾಗುತ್ತದೆ ಎಂದು ವಿಶ್ಲೇಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಕೋ.ಸೌ. ವೇದಿಕೆ ಅಧ್ಯಕ್ಷೀಯ ಮಂಡಳಿಯ ರೆ. ಫಾ. ವಿಲಿಯಂ ಮಾರ್ಟಿಸ್ ವಹಿಸಿದ್ದರು. ದೆಹಲಿ ವಿ.ವಿ.ಯ ಇತಿಹಾಸತಜ್ಞ ಪ್ರೊ. ಶಂಷುಲ್ ಇಸ್ಲಾಂ, ಶಿವಮೊಗ್ಗದ ಸಾಹಿತಿ ಪ್ರೊ. ಶ್ರೀಕಂಠ ಕೊಡಿಗೆ, ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಸುಂದರಿ ಪುತ್ತೂರು, ಕ.ಕೋ.ಸೌ. ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್, ಕಾರ್ಯದರ್ಶಿ ದೀಪು ಮತ್ತು ದಿನಕರ ಎಸ್. ಬೇಂಗ್ರೆ, ಜಿಲ್ಲಾ ಗೌರವಾಧ್ಯಕ್ಷ ಗೋಪಾಲ ಬಿ. ಶೆಟ್ಟಿ, ಜಿಲ್ಲಾಧ್ಯಕ್ಷ ಜಿ. ರಾಜಶೇಖರ್ ಇದ್ದರು.
ಜಿಲ್ಲಾ ಜಂಟಿ ಕಾರ್ಯದರ್ಶಿ ಹುಸೇನ್ ಸ್ವಾಗತಿಸಿ, ರಾಜ್ಯ ಜಂಟಿ ಕಾರ್ಯದರ್ಶಿ ರಾಬಿನ್ ಕಾರ್ಯಕ್ರಮ ಸಂಯೋಜಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement