ಚಿರತೆ ಹಾವಳಿ ತಪ್ಪಿಸಿ...
ಮೂಲ್ಕಿ ಸಮೀಪದ ಪಡುಪಣಂಬೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಎರಡು ಮರಿಗಳೊಂದಿಗಿರುವ ಚಿರತೆ ಆಗಾಗ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.
ಬೆಳ್ಳಾಯರು, ಇಂದಿರಾನಗರ, ಕೆರೆಕಾಡು ಪರಿಸರದಲ್ಲಿ ತಿರುಗಾಡುತ್ತಿದ್ದ ಚಿರತೆ ಸಂಸಾರ ಇದೀಗ ಪುನರೂರು ಪರಿಸರದ ತೋಕೂರು ತಪೋವನದ ಡಾ.ಎಂ. ರಾಮಣ್ಣ ಶೆಟ್ಟಿ ಶಾಲೆ ಹಿಂದುಗಡೆ ಕಂಡುಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದರಿಂದ ಶಾಲೆಯ ಮಕ್ಕಳು, ಶಿಕ್ಷಕರು, ಸಿಬ್ಬಂದಿ ಆತಂಕಗೊಂಡಿದ್ದಾರೆ.
ಸ್ಥಳೀಯ ಯುವಕರು ರಾತ್ರಿ ವೇಳೆ ಹುಡುಕಾಟ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆಯವರು ಮೊದಲಿಗೆ ಬೆಳ್ಳಾಯರು ಕಾಡು ಪ್ರದೇಶದಲ್ಲಿ ಚಿರತೆ ಹಿಡಿಯಲು ಬೋನು ಇಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ಅಲ್ಲಿಂದ ಬೋನನ್ನು ಪುನರೂರಿನ ಭಾರತಾ ಮಾತಾ ಶಾಲೆಯ ಹಿಂಬದಿ ಕಾಡಿನಲ್ಲಿಟ್ಟಿದ್ದಾರೆ. ಇದಾದ ಬಳಿಕ ಚಿರತೆ ಎಸ್. ಕೋಡಿ ಮೂಲಕ ತೋಕೂರಿನ ತಪೋವನದತ್ತ ತನ್ನ ವಾಸಸ್ಥಾನವನ್ನು ಬದಲಿಸಿದೆ ಎಂದು ತಿಳಿದುಬಂದಿದೆ. ಚಿರತೆ ಹಾವಳಿಯಿಂದಾಗಿ ಪರಿಸರದ ಗ್ರಾಮಸ್ಥರು ತೀವ್ರ ಆತಂಕಕ್ಕೀಡಾಗಿದ್ದು, ಅರಣ್ಯ ಇಲಾಖೆ ಶೀಘ್ರ ಚಿರತೆ ಹಿಡಿಯಲು ಕ್ರಮ ಕೈಗೊಳ್ಳಬೇಕಾಗಿದೆ.
ಗ್ರಾಮಸ್ಥರು, ಮೂಲ್ಕಿ, ಪಡುಪಣಂಬೂರು
ರಸ್ತೆ ಬದಿ ವಾಹನ ಪಾರ್ಕಿಂಗ್: ಪಾದಚಾರಿಗಳಿಗೆ ಸಂಕಷ್ಟ
ದೇವಾಲಯಗಳ ನಗರಿ ಎಂದೇ ಖ್ಯಾತಿಯನ್ನು ಪಡೆದಿರುವ ಉಡುಪಿಯಲ್ಲಿ ವಾಹನಗಳನ್ನು ರಸ್ತೆಗಳಲ್ಲೇ ಪಾರ್ಕ್ ಮಾಡುವುದರಿಂದ ಜನರು ನಡೆದುಕೊಂಡು ಹೋಗಲು ಕಷ್ಟಕರವಾಗಿದೆ. ಫುಟ್ಪಾತ್ಗಳು ಇಲ್ಲದೆ ಇರುವುದು ಪಾದಚಾರಿಗಳ ಸಮಸ್ಯೆಯನ್ನು ಇಮ್ಮಡಿಗೊಳಿಸಿದೆ.
ರಸ್ತೆ ಅಗಲಗೊಳಿಸಲಾಗಿದ್ದರೂ ಹೆಚ್ಚುವರಿ ಸ್ಥಳವನ್ನು ವಾಹನ ಪಾರ್ಕಿಂಗ್ಗೆ ಬಳಸಿಕೊಂಡಿರುವುದು ಖೇದಕರ. ಮುಖ್ಯವಾಗಿ ನಗರಸಭಾ ಕಚೇರಿಯ ಮುಂಭಾಗ, ಸಿಂಡಿಕೇಟ್ ಟವರ್ ಬಳಿ, ಡಯಾನ ಹೊಟೇಲ್ ಬಳಿ, ಕಿದಿಯೂರು ಹೊಟೇಲ್ ಪರಿಸರ ಸೇರಿದಂತೆ ಇತರ ಕಡೆಗಳಲ್ಲಿ ರಸ್ತೆ ಹಾಗೂ ಪಾದಚಾರಿಗಳು ನಡೆಯುವ ಸ್ಥಳ ವಾಹನ ನಿಲುಗಡೆಯ ತಾಣವಾಗಿದೆ.
ಇರುವ ಕೆಲವೇ ಕೆಲವು ಫುಟ್ಪಾತ್ಗಳು ಅವ್ಯವಸ್ಥಿತವಾಗಿದೆ. ಹಾಗಾಗಿ ಇರುವಂತ ಫುಟ್ಪಾತ್ಗಳಲ್ಲಿಯೂ ನಿರಾಳವಾಗಿ ನಡೆಯುವ ಪರಿಸ್ಥಿತಿ ಇಲ್ಲವಾಗಿದೆ. ರಸ್ತೆ ಅಗಲೀಕರಣಕ್ಕೆ ನೀಡಿದಷ್ಟೇ ಮಹತ್ವವನ್ನು ಫುಟ್ಪಾತ್ ನಿರ್ಮಾಣಕ್ಕೂ ನೀಡಿ ಪಾದಚಾರಿಗಳು ನಿತ್ಯ ಸಂಕಷ್ಟ ಅನುಭವಿಸುವುದನ್ನು ತಪ್ಪಿಸಬೇಕಾಗಿದೆ.