ವ್ಯವಹಾರ ಹೆಚ್ಚಿಸಲು ಎಲ್ಐಸಿ ಸಂಖ್ಯಾಶಾಸ್ತ್ರಕ್ಕೆ ಮೊರೆ
ಉಡುಪಿ: ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಮತ್ತೊಮ್ಮೆ ಸಂಖ್ಯಾಶಾಸ್ತ್ರದ ಹೆಸರು ಹೇಳಿ ತನ್ನ ವ್ಯವಹಾರವನ್ನು ಹೆಚ್ಚಿಸುವುದಕ್ಕೆ ಹೊರಟಿದೆ.
ಅದಕ್ಕಾಗಿ ಈ ತಿಂಗಳ 11ನೇ ತಾರೀಕನ್ನು ಬಳಸಿಕೊಳ್ಳುತ್ತಿದೆ. ಈ ವರ್ಷದ ಡಿಸೆಂಬರ್ ತಿಂಗಳ 11 ಎನ್ನುವ ತಾರೀಕು (11/12/13) ಇನ್ನೊಮ್ಮೆ ಬರಬೇಕಾದರೆ ಇನ್ನೂ 1000 ವರ್ಷಗಳನ್ನು ಕಾಯಬೇಕು. ಆದ್ದರಿಂದ ಈ ತಾರೀಕಿನಂದು ಜೀವ ವಿಮೆ ಮಾಡುವುದು ಜೀವನದಲ್ಲಿಯೇ ಮರೆಯಲಾಗದ ಘಟನೆ ಎಂದು ಎಲ್ಐಸಿ ಪ್ರಚಾರ ಮಾಡುತ್ತಿದೆ.
ಇದೇ ರೀತಿ ಕಳೆದ ವರ್ಷವೂ ಜೀವ ವಿಮಾ ನಿಗಮವು 12/12/12 ತಾರೀಕಿನಂದೂ ಕೂಡ ಒಂದೇ ದಿನದಲ್ಲಿ ಕೋಟ್ಯಂತರ ರುಪಾಯಿ ವ್ಯವಹಾರ ಮಾಡಿಕೊಂಡಿತ್ತು. ಉಡುಪಿ ವಿಭಾಗೀಯ ಕಚೇರಿಯಿಂದ ಈ ಪ್ರಯುಕ್ತ ಕರಪತ್ರವನ್ನು ಹೊರತಂದಿದ್ದು, ಅದರಲ್ಲಿ 11/12/13 ಅತ್ಯಂತ ಅದೃಷ್ಟಶಾಲಿ ದಿನ ಎಂದು ಹೇಳಲಾಗಿದೆ.
ಈ ತಾರೀಕಿನಲ್ಲಿರುವ ಎಲ್ಲ ದಿನಗಳನ್ನು ಕೂಡಿದರೇ ಮೊತ್ತ 9 ಆಗುತ್ತದೆ, 9 ಎನ್ನುವುದು ಸಂಖ್ಯಾ ಶಾಸ್ತ್ರದ ಪ್ರಕಾರ ಶ್ರೇಷ್ಟವಾದ ಸಂಖ್ಯೆ. ಗ್ರಹಗಳು, ಪುರಾಣಗಳು, ರತ್ನಗಳು, ರಸಗಳು, ರಾತ್ರಿಗಳು, ಧಾನ್ಯಗಳೆಲ್ಲವೂ 9 ಆಗಿವೆ.
ಗಣಿತದ ಮೂಲ ಸಂಖ್ಯೆಗಳಲ್ಲಿ ಅತೀ ದೊಡ್ಡ ಮತ್ತು ಕೊನೆಯ ಸಂಖ್ಯೆ 9, ಎನ್ನುವುದು ನಿಖರತೆಯ ಸಂಕೇತ, ವಿಶ್ವಸಾಧನೆ, ವ್ಯಾವಹಾರಿಕ ಬೆಳವಣಿಗೆಯ ಸಂಕೇತ... ಎಂದೆಲ್ಲಾ ಈ ತಾರೀಕಿನ ಮಹಿಮೆಯನ್ನು ಹೇಳಲಾಗಿದೆ.
ಜನ ಮರುಳೋ ಜಾತ್ರೆ ಮರುಳೋ ಗೊತ್ತಿಲ್ಲ. ಆದರೆ, ಸಂಖ್ಯಾಶಾಸ್ತ್ರವನ್ನು ನಂಬುವ ಜನರು ಮಾತ್ರ ನಮ್ಮಲ್ಲಿ ಬೇಕಾದಷ್ಟು ಇದ್ದಾರೆ.
ಇದು ಗೊತ್ತಿರುವ ಎಲ್ಐಸಿ ಭಾರತೀಯರ ಭಾವನಾತ್ಮಕ ನಂಬಿಕೆಯನ್ನು ತನ್ನ ವ್ಯವಹಾರ ಹೆಚ್ಚಿಸಿಕೊಳ್ಳುವುದಕ್ಕೆ ಬಳಸಿಕೊಳ್ಳುತ್ತಿದೆ.