ಪ್ರತಿಭೆ ಗುರುತಿಸುವಲ್ಲಿ ಶಿಕ್ಷಕರೊಂದಿಗೆ ಪೋಷಕರು ಸಹಕರಿಸಿ: ಸುನಿಲ್ ಕುಮಾರ್
ಹೆಬ್ರಿ: ಇಂದಿನ ಪೈಪೋಟಿ ಯುಗದಲ್ಲಿ ಶಾಲೆಗಳು ಶೈಕ್ಷಣಿಕ ಚಟುವಟಿಕೆಗಳಿಗಷ್ಟೇ ಸೀಮಿತವಾಗದೆ ಸಾಂಸ್ಕೃತಿಕ, ಕ್ರೀಡಾ ವಿಭಾಗಗಳಲ್ಲೂ ಗಮನಾರ್ಹ ಸಾಧನೆ ಮಾಡಬೇಕಿದೆ ಎಂದು ಶಾಸಕ ವಿ. ಸುನಿಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಹೆಬ್ರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆರಂಭಗೊಂಡ ಎರಡು ದಿನಗಳ ತಾಲೂಕು ಪ್ರತಿಭಾ ಕಾರಂಜಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜ್ಯೋತಿ ಬೆಳಗಿಸಿ, ಹಿಂಗಾರದ ಹೂ ಅರಳಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪಂ. ಸದಸ್ಯ ಎಂ. ಮಂಜುನಾಥ ಪೂಜಾರಿ ತಾಲೂಕು ಮಟ್ಟದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಸುವ ಮೂಲಕ ಹೆಬ್ರಿಗೆ ತಾಲೂಕು ಭಾಗ್ಯ ಅತೀ ಶೀಘ್ರ ಲಭಿಸಲಿ ಎಂದು ಆಶಿಸಿದರು.
ಹೆಬ್ರಿ ಪಂಚಾಯಿತಿ ಅಧ್ಯಕ್ಷೆ ಸುಮಾ ಎನ್. ಅಡ್ಯಂತಾಯ, ತಾಲೂಕು ಪಂಚಾಯಿತಿ ಸದಸ್ಯೆ ಮಮತಾ ನಾಯ್ಕ್, ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಚಂದ್ರಶೇಖರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವೀಂದ್ರ ಹೆಗ್ಡೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಕಾಶ್, ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಲಕ್ಷ್ಮೀಕಾಂತ್ ಭಟ್, ಎಸ್‌ಡಿಎಂಸಿ ಅಧ್ಯಕ್ಷ ಸುಧಾಕರ ಸಾಲ್ಯಾನ್, ತಾಲೂಕು ಅನುದಾನಿತ ಪ್ರಾ.ಶಾ. ಶಿಕ್ಷಕರ ಸಂಘದ ಅಧ್ಯಕ್ಷ ವಿ.ಕೆ ರಾವ್, ಸುರೇಶ್ ಭಟ್, ಶಿಕ್ಷಕರ ಸಂಘದ ಸತೀಶ್ಚಂದ್ರ ಬಾಬು, ರಮಾನಂದ ಶೆಟ್ಟಿ, ಮಹಾಬಲ ನಾಯ್ಕ್, ಕೃಷ್ಣ ಮೊಯ್ಲಿ, ಜಯಂತಿ ಶೆಟ್ಟಿ, ಸತೀಶ್ ರಾವ್ ಇದ್ದರು.
ಸಮಾರಂಭದಲ್ಲಿ ಎರಡು ದಿನಗಳ ಕಾರ್ಯಕ್ರಮದ ಮಹಾದಾನಿಗಳಾದ ಶಿಕ್ಷಕರ ಸಂಘದ ಅಧ್ಯಕ್ಷ ರವೀಂದ್ರ ಹೆಗ್ಡೆ ದಂಪತಿ, ರಾಮ್ ಜ್ಯುವೆಲ್ಲರ್ಸ್ ಮಾಲೀಕ ರಾಮ್ ಕುಲಾಲ್, ಚಾರಾ ಸಣ್ಣಮನೆ ಭಾಸ್ಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಚಂದ್ರಶೇಖರ್ ಅವರನ್ನು ಗೌರವಿಸಲಾಯಿತು.
ಶಿಕ್ಷಕ ಸುರೇಶ್ ಮತ್ತು ಬಿಆರ್‌ಪಿ ವಸಂತ್ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮನಮೋಹನ್ ಎಚ್.ಕೆ ಸ್ವಾಗತಿಸಿ, ಮುಖ್ಯೋಪಾಧ್ಯಾಯಿನಿ ಶಕುಂತಲಾ ವಂದಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಕಾರಿಗಳ ಕಚೇರಿ ಮತ್ತು ಹೆಬ್ರಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.