ಸುದ್ದಿ ಸಂಕ್ಷೇಪ
ಪ್ರಥಮ್ ಕಾಮತ್ಗೆ ಪ್ರಶಸ್ತಿ
ಉಡುಪಿ: ಇಲ್ಲಿನ ಎಸ್.ವಿ.ಕೆ. ಆಂಗ್ಲ ಮಾಧ್ಯಮ ಶಾಲೆಯ 2ನೇ ತರಗತಿ ವಿದ್ಯಾರ್ಥಿ ಕೆ. ಪ್ರಥಮ್ ಕಾಮತ್ ಕಟಪಾಡಿ ಕರ್ನಾಟಕ ಸರ್ಕಾರದ ಪ್ರತಿಭಾ ಕಾರಂಜಿ 2013- 14ರ ಅಚ್ಚಡ ಮತ್ತು ಪಡುಬೆಳ್ಳೆ ಕ್ಲಸ್ಟರ್ ಮಟ್ಟದ ಕ್ಲೇ ಮಾಡೆಲಿಂಗ್ ಹಾಗೂ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ, ಉಡುಪಿ ವಲಯ ಮಟ್ಟದ ಪ್ರತಿಭಾ ಕಾರಂಜಿಯ ಛದ್ಮವೇಷ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪ್ರಥಮ್ ಕಾಮತ್ ಅವರು ಕೆ. ಸುಜಾತ-ನಾಗೇಶ್ ಕಾಮತ್ ಕಟಪಾಡಿ ದಂಪತಿ ಪುತ್ರ.
ಬಾಲ್ಯ ವಿವಾಹ ನಿಷೇಧ: ಭಾಷಣ ಸ್ಪರ್ಧೆ
ಉಡುಪಿ: ಕರ್ನಾಟಕ ಸರ್ಕಾರ, ಬಾಲಭವನ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಕಳ ಹಾಗೂ ಜೆಸಿಐ ಬೆಳ್ಮಣ್ಣು ಸಹಯೋಗದೊಂದಿಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಕಾರ್ಕಳ ತಾಲೂಕು ಮಟ್ಟದ ಬಾಲ್ಯ ವಿವಾಹ ನಿಷೇಧ ಕುರಿತು ಭಾಷಣ ಸ್ಪರ್ಧೆ ಕಾರ್ಕಳದ ಶ್ರೀ ಭುವನೇಂದ್ರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಜರಗಿತು.
ಕಾರ್ಕಳದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರ್ ನಾಯ್ಕ ವಿ. ಉದ್ಘಾಟಿಸಿದರು.
ಬೆಳ್ಮಣ್ ಜೆಸಿಐ ಅಧ್ಯಕ್ಷ ಸರ್ವಜ್ಞ ತಂತ್ರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳದ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾರತ್ನ, ಮೇಲ್ವಿಚಾರಕಿ ಅನುಪಮ, ಶಾಲಾ ಮುಖ್ಯ ಶಿಕ್ಷಕ ಶ್ರೀಧರ್ ಆಚಾರ್, ಗುರುಪ್ರಸಾದ್ ಭಟ್, ಯಶೋಧರ್ ಎರ್ಮಾಳ್ ಇದ್ದರು.
ವೈದ್ಯಕೀಯ ಉಚಿತ ಶಿಬಿರ
ಉಡುಪಿ: ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಟರಿ ಕ್ಲಬ್ ಶಿರ್ವ ಮತ್ತು ಭಾರತ್ ನಿರ್ಮಾಣ್ ಸ್ವಯಂ ಸೇವಕರ ತಂಡ ಸಹಭಾಗಿತ್ವದಲ್ಲಿ ಮಂಗಳೂರು ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯ ತಜ್ಞ ವೈದ್ಯರಿಂದ ಆಯೋಜಿಸಲಾದ ವೈದ್ಯಕೀಯ ಉಚಿತ ಶಿಬಿರವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಐಡಾಗಿಬ್ಬ ಡಿ' ಸೋಜ ಉದ್ಘಾಟಿಸಿದರು. ಶಿರ್ವ ಗ್ರಾ.ಪಂ. ಉಪಾಧ್ಯಕ್ಷೆ ದೀಪಿಕಾ ಶಾಲೆಟ್ ಅಧ್ಯಕ್ಷತೆ ವಹಿಸಿದ್ದರು. ಕೆ.ಎಂ.ಸಿ. ಆಸ್ಪತ್ರೆಯ ಮೂಳೆ ತಜ್ಞ ಡಾ. ರಾಮಚಂದ್ರ ಕಾಮತ್, ಡಾ. ವಾಸುದೇವ ಉಪಾಧ್ಯಾಯ, ಡಾ.ಕೆ.ಆರ್. ವೆಂಕಟಕೃಷ್ಣ, ರೋಟರಿ ಪೂರ್ವಾಧ್ಯಕ್ಷ ಡಾ. ಗುರುರಾಜ್, ಮತಾಯಸ್ ಲೋಬೊ, ಮೈಕಲ್ ಮತಾಯಸ್ ಇದ್ದರು. ಶಿಬಿರದಲ್ಲಿ ಸ್ತ್ರೀ ರೋಗ, ಮೆಡಿಸಿನ್, ಇಎನ್ಟಿ, ಕಣ್ಣು, ಮೂಳೆ, ಡೆಂಟಲ್, ಸರ್ಜರಿ ವಿಭಾಗಗಳ ತಜ್ಞ ವೈದ್ಯರು ಪಾಲ್ಗೊಂಡಿದ್ದರು. 200ಕ್ಕೂ ಅಧಿಕ ಸಾರ್ವಜನಿಕರು ಪಾಲ್ಗೊಂಡರು.
ಚಿತ್ರಕಲಾ ಪ್ರದರ್ಶನ
ಕುಂದಾಪುರ: ಇಲ್ಲಿನ ಕುಂಭಾಶಿ ವಿನಾಯಕ ಸಭಾಗೃಹದಲ್ಲಿ ಕುಂಭಾಶಿ ಆರಾಧನ ವೇದಿಕೆ ಮತ್ತು ಕುಂದಾಪುರ ತ್ರಿವರ್ಣ ಕಲಾ ಕೇಂದ್ರದ ಆಶ್ರಯದಲ್ಲಿ 'ಕಲಾರಾಧನ- 2013' ಚಿತ್ರಕಲಾ ಪ್ರದರ್ಶನ ಇತ್ತೀಚೆಗೆ ಜರಗಿತು. ಉದ್ಘಾಟಿಸಿ ಮಾತನಾಡಿದ ಉಡುಪಿ ಚಿತ್ರಕಲಾ ಮಂದಿರ ಕಾಲೇಜಿನ ಕಾರ್ಯದರ್ಶಿ ಡಾ.ಯು.ಸಿ. ನಿರಂಜನ್ ಅವರು, ಕಲಾಭಿರುಚಿ ಹೊಂದಿರುವ ಜೀವನ ಸುಖಕರವಾಗಿರಲು ಸಾಧ್ಯ ಎಂದರು. ಕೊಲ್ಲೂರು ಮೂಕಾಂಬಿಕಾ ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ.ಎಂ. ಸುಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಾವರ ಜೂ. ಕಾಲೇಜಿನ ಚಿತ್ರಕಲಾ ಶಿಕ್ಷಕ ಕೆ. ದಿನಮಣಿ ಶಾಸ್ತ್ರಿ, ಆರಾಧನ ವೇದಿಕೆ ವ್ಯವಸ್ಥಾಪಕ ರವಿರಾಜ್ ಕುಂಭಾಶಿ, ತ್ರಿವರ್ಣಕಲಾ ಕೇಂದ್ರದ ಆಡಳಿತ ನಿರ್ದೇಶಕ ಹರೀಶ್ ಸಾಗಾ ಇದ್ದರು.