14ರಿಂದ ಕೆಮ್ತೂರು ತುಳು ನಾಟಕ ಸ್ಪರ್ಧೆ
ಉಡುಪಿ: ದಿ. ಕೆಮ್ತೂರು ದೊಡ್ಡಣ್ಣ ಶೆಟ್ಟಿ ಇವರ ನೆನಪಿಗಾಗಿ ತುಳಕೂಟದ ವತಿಯಿಂದ ಪ್ರತೀ ವರ್ಷ ನಡೆಸಲಾಗುವ ಕೆಮ್ತೂರು ತುಳು ನಾಟಕ 12 ವರ್ಷದ ಸ್ಪರ್ಧೆಯು 14ರಿಂದ 23ರವರೆಗೆ ಸಂಜೆ 6.30ಕ್ಕೆ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆಯಲಿದೆ ಎಂದು ತುಳುಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜಕ್ಕೆ ಒಳ್ಳೆಯ ನೀತಿ ಹಾಗೂ ಸಂದೇಶವನ್ನು ನೀಡುವ ಕೃತಿಗಳನ್ನು ಗಮನದಲ್ಲಿರಿಸಿಕೊಂಡು 10 ಅತ್ಯುತ್ತಮ ನಾಟಕಗಳಿಗೆ ಅವಕಾಶ ನೀಡಲಾಗಿದ್ದು, ಮುಂಬೈ, ಕಾಸರಗೋಡು, ಮಂಗಳೂರು, ಪುತ್ತೂರು, ಮೂಡುಬಿದಿರೆ ಹಾಗೂ ಉಡುಪಿ ಪರಿಸರದ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದೆ ಎಂದರು.
ವಿಜೇತ ತಂಡಗಳಿಗೆ ಪ್ರಥಮ ರು. 15 ಸಾವಿರ, ದ್ವಿತೀಯ ರು. 10 ಸಾವಿರ, ತೃತೀಯ ರು. 7 ಸಾವಿರ ಗಳೊಂದಿಗೆ ಶಾಶ್ವತ ಫಲಕಗಳನ್ನು ನೀಡಲಾಗುವುದು. ನಿರ್ದೇಶನ, ಸಂಗೀತ, ರಂಗವಿನ್ಯಾಸ, ನಟ, ನಟಿ, ಪ್ರತೀ ವಿಭಾಗಗಳಲ್ಲೂ ಪ್ರಥಮ ರು. 10 ಸಾವಿರ ಹಾಗೂ ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಗುವುದು ಎಂದರು.
ಸ್ಪರ್ಧೆಯನ್ನು ಶಾಸಕ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿದ್ದು, ಅತಿಥಿಗಳಾಗಿ ರಂಗ ನಿರ್ದೇಶಕ ಪ್ರೊ. ಉದ್ಯಾವರ ಮಾಧವ ಆಚಾರ್ಯ, ಉದ್ಯಮಿ ಜೆರ್ರಿ ವಿನ್ಸೆಂಟ್ ಡಯಾಸ್ ಭಾಗವಹಿಸಲಿದ್ದಾರೆ. ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭವು ಜ. 12ರಂದು ನಡೆಯಲಿದ್ದು, ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನಾಟಕ ತಂಡವು ಅಂದು ನಾಟಕ ಪ್ರದರ್ಶನವನ್ನು ನೀಡಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಮ್ತೂರು ನಾಟಕ ಸ್ಪರ್ಧಾ ಸಮಿತಿ ಸಂಚಾಲಕ ಬಿ. ಪ್ರಭಾಕರ ಭಂಡಾರಿ, ತುಳುಕೂಟದ ಕೋಶಾಧಿಕಾರಿ ಎಂ.ಜಿ. ಚೈತನ್ಯ, ಸದಸ್ಯ ಉದ್ಯಾವರ ನಾಗೇಶ್ ಕುಮಾರ್ಮತ್ತಿತರರು ಇದ್ದರು.