ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಮತ ಪ್ರದರ್ಶನ

Rashmi Kasaragodu
Updated On : 13 Dec 2013, 11:51 am

ಉಡುಪಿ: ವಿವಿಧ ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ಮುಂದಿಟ್ಟಿರುವ ಕಾರ್ಮಿಕರ ಮತ್ತು ಜನಸಾಮಾನ್ಯರ 10 ಪ್ರಮುಖ ಬೇಡಿಕೆಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿರುವ ಹಿನ್ನೆಲೆಯಲ್ಲಿ ಸಿಐಟಿಯು, ಎಐಟಿಯುಸಿ, ಐಎನ್‌ಟಿಯುಸಿ, ಬಿಎಂಎಸ್, ಯುಟಿಯುಸಿ ಇತ್ಯಾದಿ 11 ಕಾರ್ಮಿಕ, ಬ್ಯಾಂಕ್, ವಿಮೆ, ರಕ್ಷಣಾ ಇಲಾಖೆ, ಕೇಂದ್ರ ಮತ್ತು ಸರ್ಕಾರಿ ನೌಕರರ ಸಂಘಗಳು ಗುರುವಾರ ದೆಹಲಿ ಚಲೋ ಕಾರ್ಯಕ್ರಮವನ್ನು ನಡೆಸಿದ್ದು, ಇದಕ್ಕೆ ಬೆಂಬಲವಾಗಿ ಉಡುಪಿ ಜಿಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನಗರದ ಗಾಂಧಿ ಪ್ರತಿಮೆಯ ಮುಂದೆ ಮತಪ್ರದರ್ಶನ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಕಾರ್ಯದರ್ಶಿ ಬಾಲಕೃಷ್ಟ ಶೆಟ್ಟಿ, ಬೆಲೆ ಏರಿಕೆಯನ್ನು ತಡೆಗಟ್ಟಬೇಕು, ಉದ್ಯೋಗಾವಕಾಶಗಳನ್ನು ಹೆಚ್ಚಿಸಬೇಕು, ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಅಸಂಘಟಿತ ಕಾರ್ಮಿಕರಿಗಾಗಿ ರಾಷ್ಟ್ರೀಯ ಸಾಮಾಜಿಕ ಸುರಕ್ಷಾ ನಿಧಿ ಸ್ಥಾಪಿಸಬೇಕು, ಕಾರ್ಮಿಕರಿಗೆ 10 ಸಾವಿರ ಕನಿಷ್ಠ ವೇತನ ನೀಡಬೇಕು, ಎಲ್ಲರಿಗೂ ಪಿಂಚಣಿ ನೀಡಬೇಕು ಇತ್ಯಾದಿ 10 ಬೇಡಿಕೆಗಳನ್ನು ಮುಂದಿಟ್ಟುಕೊಂಡು 14 ಬಾರಿ ಸಾರ್ವತ್ರಿಕ ಮುಷ್ಕರ ನಡೆಸಲಾಗಿದೆ. ಫೆ.20- 21ರಂದು 2 ದಿನಗಳ ಚಾರಿತ್ರಿಕ ಮುಷ್ಕರ ನಡೆಸಲಾಗಿದೆ. ಆದರೆ ಕೇಂದ್ರ ಸರ್ಕಾರ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಪ್ರಧಾನ ಮಂತ್ರಿಗಳು ಕಾರ್ಮಿಕ ಸಮಾವೇಶಗಳಲ್ಲಿ ಕಾಟಾಚಾರದ ಮಾತುಗಳನ್ನಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆ ನಡೆದ 8 ತಿಂಗಳಾದರೂ ಕಾರ್ಮಿಕ ಸಂಘಟನೆಗಳನ್ನು ಕರೆದು ಮಾತನಾಡುದ ಸೌಜನ್ಯ ಕೂಡ ಸರ್ಕಾರಕ್ಕೆ ಇಲ್ಲ. ಕಾರ್ಮಿಕರ ಮತ್ತು ಜನತೆಯ ಬಗ್ಗೆ ಅಸಡ್ಡೆ ತೋರುತ್ತಿರುವ ಸರ್ಕಾರಕ್ಕೆ ಕಾರ್ಮಿಕ ವರ್ಗವು ತೀವ್ರ ಹೋರಾಟದ ಮೂಲಕ ಉತ್ತರ ನೀಡಲು ತೀರ್ಮಾನಿಸಿದೆ ಎಂದವರು ಎಚ್ಚರಿಕೆ ನೀಡಿದರು. ಇತರ ಸಂಘಟನೆಗಳ ನಾಯಕರು ಈ ಸಂದರ್ಭದಲ್ಲಿ ಮಾತನಾಡಿದರು.
ಮತಪ್ರದರ್ಶನದ ನೇತೃತ್ವವನ್ನು ಎಐಟಿಯುಸಿಯ ಕೆ.ವಿ. ಭಟ್, ವಿಮಾ ನೌಕರರ ಸಂಘದ ಯು. ಗುರುದತ್, ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಯು. ಶಿವರಾಯ, ಬಿಎಂಎಸ್‌ನ ಬಾಲಗಂಗಾಧರ ರಾವ್ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement