ಅಗ್ನಿ ಆಕಸ್ಮಿಕ: 4 ನಾಡ ದೋಣಿಗಳು ಭಸ್ಮ
ಮಲ್ಪೆ: ಇಲ್ಲಿನ ಪಡುಕರೆ ಸಮುದ್ರ ತೀರದಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಅಗ್ನಿ ಆಕಸ್ಮಿಕಕ್ಕೆ 4 ನಾಡ ದೋಣಿ (ಡಿಸ್ಕೋ ದೋಣಿಗಳು) ಸಂಪೂರ್ಣ ಸುಟ್ಟು ಕರಕಲಾಗಿದ್ದು, 60 ಲಕ್ಷ ನಷ್ಟ ಸಂಭವಿಸಿದೆ. ಬೆಂಕಿ ಆಕಸ್ಮಿಕಕ್ಕೆ ಸಮೀಪದಲ್ಲಿದ್ದ ಟ್ರಾನ್ಸ್ಫಾರ್ಮರ್ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹೇಳಲಾಗಿದೆ.
ಸಮೀಪದ ಹೂಡೆ ಎಂಬಲ್ಲಿನ ನಾಡದೋಣಿ ಮೀನುಗಾರರ ಗುಂಪಿಗೆ ಸೇರಿದ ಮೀನುಗಾರರ ಜಯಮಾರುತಿ ಎಂಬ ಹೆಸರಿನ 2 ಮತ್ತು ಗುರುರಾಘವೇಂದ್ರ ಹೆಸರಿನ 2 ಜೋಡಿ ದೋಣಿಗಳನ್ನು ಪಡುಕರೆ ಬೀಚಿನಲ್ಲಿ ಸಮುದ್ರದಿಂದ ಮೇಲಕ್ಕೆ ಎಳೆದು ಇಡಲಾಗಿತ್ತು. ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಟ್ರಾನ್ಸ್ಫಾರ್ಮರ್ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯ ಕಿಡಿಗಳು ಕೆಳಕ್ಕೆ ಬಿದ್ದು ಒಣಗಿದ್ದ ಹುಲ್ಲಿಗೆ ಹತ್ತಿಕೊಂಡಿತು, ಹುಲ್ಲಿನಿಂದ ಬೆಂಕಿ ಸುಮಾರು 50 ಮೀಟರ್ಗಳಷ್ಟು ದೂರದವರೆಗೆ ಹರಡಿ ಸಮೀಪದಲ್ಲಿದ್ದ ತೆಂಗಿನ ಗರಿಗಳಿಗೆ ತಗಲಿದ್ದು, ಅದರಡಿಯಲ್ಲಿ ಇರಿಸಲಾಗಿದ್ದ ದೋಣಿಗಳಿಗೆ ತಗಲಿತು.
ಚೆನ್ನಾಗಿ ಒಣಗಿದ್ದ ಮರದಿಂದ ಮಾಡಲಾದ ಈ ದೋಣಿಗಳಿಗೆ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಂಡಿತು. ಇದನ್ನು ನೋಡಿದ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರು ಮತ್ತು ಅಲ್ಲಿದ್ದ ಇತರ 5 ದೋಣಿಗಳನ್ನು ಪಕ್ಕಕ್ಕೆ ಜರುಗಿಸಿ ಹೆಚ್ಚಿ ಅನಾಹುತ ತಪ್ಪಿಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಬರುವಷ್ಟರಲ್ಲಿ 4 ದೋಣಿಗಳು ಬೆಂಕಿಗಾಹುತಿಯಾಗಿದ್ದವು. ಸ್ಥಳೀಯ ಗೋಪಾಲ ಎಂಬವರ ತೆಂಗಿನ ಗರಿಗಳ ಚಪ್ಪರ ಸಂಪೂರ್ಣ ಸುಟ್ಟು ಹೋಗಿದ್ದು, ಚಪ್ಪರದ ಕೆಳಗಿದ್ದ ಮಹಾಲಕ್ಷ್ಮಿ ಎಂಬ ಹೆಸರಿನ ಇನ್ನೊಂದು ದೋಣಿಯೂ ಭಾಗಶಃ ಹಾನಿಗೊಳಗಾಗಿದೆ.