ಅಡಕೆ ಸಾಯಲು ಬಿಡಬಾರದು: ಶಕುಂತಳಾ ಶೆಟ್ಟಿ
ಸುಬ್ರಹ್ಮಣ್ಯ: ಅಡಕೆ, ತೆಂಗುಗಳ ಸಮೃದ್ಧ ನಾಡು ನಮ್ಮದು. ಇಲ್ಲಿನ ಕೃಷಿಕರನ್ನು ಉನ್ನತಮಟ್ಟಕ್ಕೆ ಕೊಂಡೊಯ್ದದ್ದೇ ಅಡಕೆ. ನಮ್ಮೆಲ್ಲರ ಮಾನ ಉಳಿಸಿದ ಅಡಕೆ ಇಂದು ವಿಷ ಆಗುತ್ತಿದೆ ಎಂದಾದರೆ ಅದು ನಮ್ಮೆಲ್ಲರ ಸಾವಿಗೆ ಕಾರಣವಾಗಬಹುದು. ಆದ್ದರಿಂದ ನಾವು ಸಾಯದೆ ಅಡಕೆಯನ್ನೂ ಸಾಯಲು ಬಿಡಬಾರದು ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ ಕಿದು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ನಡೆದ ಎರಡು ದಿನಗಳ ಕೃಷಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಭಾರತೀಯ ಸಂಸ್ಕೃತಿಯಲ್ಲಿ ವೀಳ್ಯದೆಲೆ- ಅಡಕೆ ಇರುವ ತಾಂಬೂಲಕ್ಕೆ ವಿಶೇಷ ಪ್ರಾಧಾನ್ಯತೆ ಇದೆ. ಸಾವಿರಾರು ವರ್ಷಗಳಿಂದ ಇದನ್ನು ಉಪಯೋಗಿಸುತ್ತಿದ್ದರೂ ಇಂದಿನವರೆಗೆ ಅದು ವಿಷ ಆಗಿಲ್ಲ. ವಿಷಯುಕ್ತ ಪದಾರ್ಥ ಸೇರಿಸಿ ಗುಟ್ಕಾ ಆದರೆ ಮಾತ್ರ ಅದು ವಿಷ. ಅಡಕೆಯನ್ನೇ ನೋಡದ, ತಿನ್ನದವರು ಮಾಡಿದ ಅಧ್ಯಯನ ಇದಾಗಿದೆ. ಸಮಿತಿಯು ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ. ಆದರೆ ಕೇಂದ್ರ ಸರ್ಕಾರ ಇನ್ನೂ ಅಡಕೆ ವಿಷ ಎಂದು ಹೇಳಿಲ್ಲ. ಅಡಕೆ ವಿಷವಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಡಕೆ ಬೆಳೆ ಬೆಳೆಯಲು, ಸಂಶೋಧನೆ ನಡೆಸಲು ಯಾಕೆ ಪ್ರೋತ್ಸಾಹ ನೀಡುತ್ತಿವೆ ಎಂದು ಪ್ರಶ್ನಿಸಿದರು.
ಜಿ.ಪಂ. ಸದಸ್ಯ ದೇವರಾಜ್ ಕೆ.ಎಸ್ ಮಾತನಾಡಿ, ಅಡಕೆ ಅಪ್ಪಟ ದೇಶೀಯ ಬೆಳೆ. ಅಡಕೆಗೆ ವಿಷ ಎಂದು ಹೆದರಿದ ಕೃಷಿಕರ ಜ್ವರ ಹೋಗಲಾಡಿಸಬೇಕೆಂದು ಜಿ.ಪಂ. ಸದಸ್ಯೆ ಕುಮಾರಿ ವಾಸುದೇವನ್, ಗ್ರಾ.ಪಂ. ಅಧ್ಯಕ್ಷೆ ಶಾರದಾ, ತಾ.ಪಂ. ಸದಸ್ಯೆ ಸರೋಜಿನಿ ಜಯಪ್ರಕಾಶ್ ಹೇಳಿದರು.
ತಾ.ಪಂ ಅಧ್ಯಕ್ಷೆ ಶಶಿಪ್ರಭಾ ಅಧ್ಯಕ್ಷತೆ ವಹಿಸಿದ್ದರು. ಸಿಪಿಸಿಆರ್‌ಐನ ನಿರ್ದೇಶಕ ಡಾ. ಜಾರ್ಜ್ ವಿ. ಥೋಮಸ್ ಪ್ರಸ್ತಾವನೆಗೈದರು. ಡಾ. ನಾಗರಾಜ ಎನ್.ಆರ್. ಕಾರ್ಯಕ್ರಮ ನಿರೂಪಿಸಿದರು.
ಸಿಪಿಸಿಆರ್‌ಐನ ವಿಟ್ಲ ಕೇಂದ್ರದ ಮುಖ್ಯಸ್ಥ ಡಾ.ಕೆ.ಎಸ್. ಆನಂದ ಸ್ವಾಗತಿಸಿದರು. ಸಿಪಿಸಿಆರ್‌ಐ ಕಿದುವಿನ ತಾಂತ್ರಿಕ ಅಧಿಕಾರಿ ಎನ್. ನಾಗೇಶ್ ವಂದಿಸಿದರು.
--