ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಉಡುಪಿ

ಆರೋಗ್ಯ ಜಾಗೃತಿಗಾಗಿ ವೈದ್ಯರ ಸೈಕಲ್ ಪ್ರವಾಸ

Mainashree
Updated On : 23 Dec 2013, 10:29 am

ಮಣಿಪಾಲ: ಮಣಿಪಾಲ ವಿವಿಯ 80ರ ದಶಕದ ಹಳೆ ವಿದ್ಯಾರ್ಥಿ, ಪ್ರಸ್ತುತ ಅಮೆರಿಕದ ಮೆಡಿಸಿನ್ ಸೈನ್ಸ್ ಫ್ರಾಂಟಿಯರ್ಸ್ (ಎಂಎಸ್ಎಫ್) ಸಂಸ್ಥೆಯ ಅಧ್ಯಕ್ಷ ಡಾ. ಉನ್ನಿ ಕರುಣಾಕರ್ ಅವರು ಕಾಶ್ಮೀರದ ಶ್ರೀನಗರದಿಂದ ಹೊರಟು ಸೈಕಲ್ನಲ್ಲಿ ಕೇರಳದ ಕನ್ಯಾಕುಮಾರಿಗೆ ತೆರಳುತ್ತಿದ್ದು, ದಾರಿ ಮಧ್ಯೆ ಶನಿವಾರ ತಾವು ಕಲಿತ ಮಣಿಪಾಲ ವಿವಿಗೆ ಭೇಟಿ ನೀಡಿದರು.
 ನಮ್ಮ ದೇಶದಲ್ಲಿ ಇನ್ನೂ ಜನಸಾಮಾನ್ಯರು ಆರೋಗ್ಯ ರಕ್ಷಣೆ ಬಗ್ಗೆ ಸಾಕಷ್ಟು ಜಾಗೃತರಾಗಿಲ್ಲ. ಛತ್ತೀಸ್ಗಡ, ಬಿಹಾರದಂತಹ ರಾಜ್ಯಗಳಲ್ಲಿ ಇನ್ನೂ ಜನರಿಗೆ ಯಾವುದೇ ರೀತಿಯ ಆರೋಗ್ಯ ಸೇವೆಗಳು ತಲುಪುತ್ತಿಲ್ಲ. ಇದಕ್ಕೆ ಕೇವಲ ಸರ್ಕಾರವನ್ನು ಹೊಣೆ ಮಾಡಲಾಗುವುದಿಲ್ಲ. ಆದ್ದರಿಂದ ದೇಶಾದ್ಯಂತ ಇಂತಹ ಜನರಲ್ಲಿಯೂ ಆರೋಗ್ಯ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ತಾವು ಈ ಸೈಕಲ್ ಪ್ರವಾಸ ಮಾಡುತ್ತಿರುವುದಾಗಿ ಡಾ. ಉನ್ನಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
 ವಿಶ್ವ ಶಾಂತಿ ನೊಬೆಲ್ ಪ್ರಶಸ್ತಿ ಪುರಸ್ಕೃತವಾಗಿರುವ ಎಂಎಸ್ಎಫ್ ವಿಶ್ವದ 70 ದೇಶಗಳಲ್ಲಿ ಕೆಲಸ ಮಾಡುತ್ತಿದೆ. ಇದು ಯಾವುದೇ ಸರ್ಕಾರ ಕರೆದಾಗ ಹೋಗಿ ಆರೋಗ್ಯ ಸೇವೆ ನೀಡುವ ಸಂಸ್ಥೆಯಲ್ಲ. ತಾನಾಗಿಯೇ ಯಾರದ್ದೇ ಹಂಗಿಲ್ಲದೆ ಕಾಂಗೋ, ಸೂಡಾನ್, ಇಥಿಯೋಪಿಯಾ ಮುಂತಾದ ದೇಶಗಳಲ್ಲಿ ನಡೆದ ವಿಕೋಪಗಳ ಸಂದರ್ಭದಲ್ಲಿ ಹೋಗಿ ಸೇವೆ ಸಲ್ಲಿಸಿದೆ. ಈ ಸಂಸ್ಥೆಯ ವೈದ್ಯರು 1.85 ಲಕ್ಷ ಮಕ್ಕಳ ಜನನ, 80 ಸಾವಿರ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮತ್ತು 7 ಕೋಟಿ ಜನರಿಗೆ ವಿವಿಧ ರೋಗಗಳ ವಿರುದ್ಧ ಲಸಿಕೆ ಸೇವೆ ನೀಡಿದೆ. ನಮ್ಮ ದೇಶದಲ್ಲಿಯೂ 7 ರಾಜ್ಯಗಳಲ್ಲಿ ಈ ಸಂಸ್ಥೆ ತನ್ನ ಆರೋಗ್ಯ ಸೇವೆ ನೀಡುತ್ತಿದೆ ಎಂದವರು ಹೇಳಿದರು.
 ಅ.12ರಂದು ಶ್ರೀನಗರದಲ್ಲಿ ಸೈಕಲ್ ಮೂಲಕ ಹೊರಟ ಉನ್ನಿ ಅವರು ಕನ್ಯಾಕುಮಾರಿಗೆ ಫೆ.1ರಂದು 5000 ಕಿ.ಮೀ. ಕ್ರಮಿಸಿ ತಲುಪಲಿದ್ದಾರೆ. ಅವರು ಮಣಿಪಾಲ ಮೂಲಕ  ಸೈಕಲ್ ಪ್ರವಾಸ ನಡೆಸುತ್ತಿದ್ದು, 3,750 ಕಿ.ಮೀ. ಕ್ರಮಿಸಿದ್ದಾರೆ. ಅವರು ಶನಿವಾರ ಮಣಿಪಾಲ ವಿಶ್ವವಿದ್ಯಾನಿಲಯ ನೀಡಿದ ಶ್ರೇಷ್ಠ ಹಳೆ ವಿದ್ಯಾರ್ಥಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement