ಆರೋಗ್ಯ ಯೋಜನೆ ಸಮಾಜದ ಎಲ್ಲ ವರ್ಗಕ್ಕೂ ಪ್ರಯೋಜನವಾಗಲಿ: ಮೊಯ್ಲಿ
ಕಾರ್ಕಳ: ಸಮಾಜದ ಎಲ್ಲ ವರ್ಗಕ್ಕೆ ಆರೋಗ್ಯ ಯೋಜನೆ ಪ್ರಯೋಜನವಾಗಬೇಕು ಎಂದು ಕೇಂದ್ರ ಇಂಧನ ಸಚಿವ ಎಂ. ವೀರಪ್ಪ ಮೊಯ್ಲಿ ತಿಳಿಸಿದರು.
ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಬಿಎಚ್ಇಎಲ್ ಕಂಪೆನಿ ಬಿಡುಗಡೆ ಮಾಡಿದ 98 ಲಕ್ಷ ಅನುದಾನದ ಕಾಮಗಾರಿಯನ್ನು ಅವರು ಭಾನುವಾರ ಉದ್ಘಾಟಿಸಿ ಮಾತನಾಡಿ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯಲ್ಲಿ ಒಟ್ಟು ಎರಡು ವರ್ಷಗಳಲ್ಲಿ ಕೇಂದ್ರ ಸರ್ಕಾರ 961.92 ಕೋಟಿ ಹಾಗೂ ರಾಜ್ಯ ಸರ್ಕಾರ ರು. 488 ಕೋಟಿ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನವನ್ನು ವಿನಿಯೋಗಿಸಿ ತಮ್ಮದೇ ಆದ ಆರೋಗ್ಯ ಯೋಜನೆಗಳನ್ನು ರಾಜ್ಯದಲ್ಲಿ ಕೈಗೊಳ್ಳುವ ಅವಕಾಶವಿದೆ ಎಂದರು.
ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಉತ್ತಮ ಹೆಸರಿದೆ. ಆರೋಗ್ಯ ಕ್ಷೇತ್ರಗಳಿಗೆ ಖಾಸಗಿ ಕಂಪೆನಿಗಳ ಜತೆಗೆ ಹುಡ್ಕೋದಿಂದ, ನಗರಾಭಿವೃದ್ಧಿ ಯೋಜನೆಯಿಂದ ಅನುದಾನಗಳನ್ನು ಉಪಯೋಗಿಸಿಕೊಳ್ಳುವ ಅವಕಾಶವಿದೆ ಎಂದರು.
ಮುಂದಿನ ದಿನಗಳಲ್ಲಿ ಕಾರ್ಕಳಕ್ಕೆ ಸುಸಜ್ಜಿತ ಪುರಭವನ ನಿರ್ಮಾಣಕ್ಕೆ ಎರಡು ಕೋಟಿ ಅನುದಾನ ತಾನು ನೀಡಲಿದ್ದೇನೆ ಎಂದರು. ಅಧ್ಯಕ್ಷತೆಯನ್ನು ಶಾಸಕ ವಿ. ಸುನಿಲ್ ಕುಮಾರ್ ವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ, ಸಂಸದ ಜಯಪ್ರಕಾಶ ಹೆಗ್ಡೆ, ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಮಾತನಾಡಿದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್, ಪುರಸಭಾ ಅಧ್ಯಕ್ಷೆ ರೆಹಮತ್, ಜಿಲ್ಲಾ ಸರ್ಜನ್ ಡಾ. ಆನಂದ ನಾಯಕ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಚಂದ್ರ ಬಾಯುರಿ ಇದ್ದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಜ್ಞಾನೇಶ್ ಕಾಮತ್ ಸ್ವಾಗತಿಸಿದರು. ಡಾ.ಪಿ.ಕೆ. ಮಲ್ಯ ಆಸ್ಪತ್ರೆಯ ಅವಶ್ಯಕತೆ ಕುರಿತು ಮನವಿ ಸಲ್ಲಿಸಿದರು. ಶುಭಧಾ ರಾವ್ ನಿರೂಪಿಸಿದರು. ಎಂ. ಸುಂದರ ಪೂಜಾರಿ ವಂದಿಸಿದರು.