ಜ. 2ರಿಂದ ಜಿಲ್ಲಾ ಬಿಜೆಪಿ ಪಾದಯಾತ್ರೆ
ಉಡುಪಿ: ಅಡಕೆ ಬೆಳೆ ನಿಷೇಧದ ಪ್ರಸ್ತಾಪ, ಜಿಲ್ಲೆಯನ್ನು ಹಾದು ಹೋಗುವ ರಾ.ಹೆ. 66ರ ಕಾಮಗಾರಿಯ ವಿಳಂಬ, ಕರಾವಳಿಯಲ್ಲಿ ಉಗ್ರರ ಚಟುವಟಿಕೆಗಳು ಮತ್ತು ರೈತರಿಗೆ ಕುಮ್ಕಿ ಹಕ್ಕು ನೀಡುವಲ್ಲಿ ರಾಜ್ಯ ಸರ್ಕಾರದ ನಿರಾಸಕ್ತಿಯನ್ನು ಪ್ರತಿಭಟಿಸಿ ಉಡುಪಿ ಜಿಲ್ಲಾ ಬಿಜೆಪಿ ಜ. 2ರಿಂದ 5ರವರೆಗೆ ಹೆಜಮಾಡಿಯಿಂದ ಬೈಂದೂರುವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಪಾದಯಾತ್ರೆಯ ಮೊದಲ ದಿನ ಹೆಜಮಾಡಿಯಿಂದ ಉಡುಪಿಗೆ (28.50 ಕಿ.ಮೀ.), 2ನೇ ದಿನ ತೆಕ್ಕಟ್ಟೆಗೆ (27 ಕಿ.ಮೀ.), 3ನೇ ದಿನ ಮರವಂತೆವರೆಗೆ (23 ಕಿ.ಮೀ.) ಮತ್ತು ಕೊನೆಯ ದಿನ ಬೈಂದೂರಿಗೆ (15 ಕಿ.ಮೀ.) ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆಯನ್ನು ಹಾದು ಹೋಗುವ ಪ್ರತಿಯೊಂದು ಗ್ರಾಮಗಳಲ್ಲಿ ಸ್ವಾಗತ, ಸಭೆ, ಬೀಳ್ಕೊಡುಗೆಗೆ ಗ್ರಾಸಮಿತಿಗಳು ಸಿದ್ಧತೆಗಳನ್ನು ನಡೆಸಿಕೊಂಡಿವೆ ಎಂದು ತಿಳಿಸಿದ್ದಾರೆ.
ಪಾದಯಾತ್ರೆಗೆ ಕಾರಣ: ಕೇಂದ್ರ ಸರ್ಕಾರವು ಅಡಕೆ ನಿಷೇಧಿಸುವ ಪ್ರಸ್ತಾಪವನ್ನು ಸುಪ್ರೀಂ ಕೋರ್ಟ್ನ ಮುಂದಿಟ್ಟಿದ್ದು, ಇದು ಲಕ್ಷಾಂತರ ಮಂದಿ ಅಡಕೆ ಬೆಳೆಗಾರರ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಆದ್ದರಿಂದ ಕೇಂದ್ರದ ಈ ನಿಲುವನ್ನು ಜಿಲ್ಲಾ ಬಿಜೆಪಿ ಖಂಡಿಸುತ್ತದೆ ಎಂದರು.
ಉಡುಪಿಯನ್ನು ಹಾದು ಹೋಗುವ ರಾ.ಹೆ. 66ರ ಅಗಲೀಕರಣ ಕಾಮಗಾರಿ 2010 ಸೆಪ್ಟಂಬರ್ನಲ್ಲಿ ಆರಂಭವಾಗಿದ್ದು 2013ರ ಮಾರ್ಚ್ನಲ್ಲಿ ಒಟ್ಟು 910 ದಿನಗಳಲ್ಲಿ ಮುಗಿಯಬೇಕಿತ್ತು. ಆದರೆ, ಡಿಸೆಂಬರ್ ಕಳೆದರೂ ಮುಗಿದಿಲ್ಲ. ಮಾತ್ರವಲ್ಲ ಭೂ ಸಾರಿಗೆ ಇಲಾಖೆ ಕಾಮಗಾರಿಯ ಕಾಲಾವಧಿ 2014ರ ಕೊನೆವರೆಗೆ ಮುಂದುವರಿಸುವುದಕ್ಕೆ ಅವಕಾಶ ನೀಡಿದೆ. ಗುತ್ತಿಗೆದಾರರ ಈ ವೈಫಲ್ಯದಿಂದ ಜನಸಾಮಾನ್ಯರು ಅನಾವಶ್ಯಕ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಿವರಿಸಿದರು.
ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚೆಗೆ ಉಗ್ರರ ಚಟುವಟಿಕೆಗಳು ಹೆಚ್ಚಿವೆ. ಈ ಜಿಲ್ಲೆಗಳು ಭಯೋತ್ಪಾದಕರ ಅಡಗುದಾಣಗಳಾಗಿರುವುದು ಅನೇಕ ಪ್ರಕರಣಗಳಲ್ಲಿ ಬಹಿರಂಗಗೊಂಡಿದ್ದು, ಆತಂಕಕ್ಕೆ ಕಾರಣವಾಗುತ್ತಿದೆ.
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿರುವಾಗ ರೈತರಿಗೆ ಅವರ ಕೃಷಿಭೂಮಿಯ ಪಕ್ಕದಲ್ಲಿರುವ ಕುಮ್ಕಿ ಭೂಮಿಯ ಹಕ್ಕನ್ನು ಕೂಡ ರೈತರಿಗೆ ನೀಡಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೆ, ಅದಿನ್ನೂ ಜಾರಿಗೊಂಡಿಲ್ಲ. ಈಗಿನ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನವೀನ್ ಶೆಟ್ಟಿ ಕುತ್ಯಾರು, ಸಂಧ್ಯಾ ನಾಯಕ್, ಉಪಾಧ್ಯಕ್ಷ ವಿಲಾಸ್ ನಾಯಕ್, ಕಾಯದರ್ಶಿ ನಳಿನಿ ಪ್ರದೀಪ್ ಇದ್ದರು.
ರಾ.ಹೆ. ಅವ್ಯವಸ್ಥೆ- ಕಾನೂನು ಹೋರಾಟಕ್ಕೆ ಸಿದ್ಧತೆ: ತಿಂಗಳೆ
ರಾ.ಹೆ. 66ರ ಅಗಲೀಕರಣ ಕಾಮಗಾರಿ ಆರಂಭವಾಗಿ ಇಷ್ಟು ತಿಂಗಳು ಕಳೆದರೂ ಇನ್ನೂ ಎಲ್ಲೆಲ್ಲಿ ಬೈಪಾಸ್, ಅಂಡರ್ ಪಾಸ್, ಓವರ್ ಬ್ರಿಡ್ಜ್ಗಳನ್ನು ನಿರ್ಮಿಸಬೇಕು ಎನ್ನುವ ಗೊಂದಲ ಇನ್ನೂ ಬಗೆಹರಿದಿಲ್ಲ. ಬ್ರಹ್ಮಾವರದಲ್ಲಿ ಅನಾವಶ್ಯಕವಾಗಿ ಕ್ಯಾಟ್ಪಾಸ್ (ಜಾನುವಾರು ರಸ್ತೆ) ನಿರ್ಮಾಣಕ್ಕೆ ಯೋಜಿಸಲಾಗಿದೆ. ಇದನ್ನು ಜನರಿಗೆ ಅನುಕೂಲವಾಗುವಂತೆ ಫ್ಲೈಓವರ್ ಪಾಸ್, ಕರಾವಳಿ ಜಂಕ್ಷನ್ನಲ್ಲಿ ಫ್ಲೈಓವರ್ ಪಾಸ್ ಆಗಬೇಕು ಎಂಬ ಬೇಡಿಕೆ ಇದೆ. ಆದರೂ, ಕೇಂದ್ರ ಭೂ ಸಾರಿಗೆ ಸಚಿವರು ಉಡುಪಿ ಜಿಲ್ಲೆಯವರೇ ಆಗಿದ್ದರೂ ಅವರು ಈ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಆದ್ದರಿಂದ ಕಾನೂನು ಹೋರಾಟಕ್ಕೆ ಬಿಜೆಪಿ ಗಂಭೀರ ಚಿಂತನೆ ನಡೆಸಿದೆ.