'ಅನೈತಿಕ' ಪೊಲೀಸ್‌ಗಿರಿ ನಿಷೇಧಿಸಿ: ಜನವಾದಿ ಸಂಘಟನೆ ಆಗ್ರಹ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಅನೈತಿಕ ಪೊಲೀಸ್‌ಗಿರಿ ನಡೆಯುತ್ತಿದ್ದು, ಪೊಲೀಸರು ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಜನವಾದಿ ಸಂಘಟನೆ ಆಗ್ರಹಿಸಿದೆ.
ಹಿಂದೂ ಮತಾಂಧ ಸಂಘಟನೆಗೆ ಪ್ರತಿಯಾಗಿ ಮುಸ್ಲಿಂ ಕೋಮುವಾದಿ ಸಂಘಟನೆಗಳು ಹುಟ್ಟಿಕೊಂಡಿವೆ. ಇವು ಕೂಡಾ ಅಪಾಯಕಾರಿ ನಿಲುವು ಹೊಂದಿದೆ. ಎಲ್ಲ ಮೂಲಭೂತವಾದಿ, ಕೋಮುವಾದಿ ಸಂಘಟನೆಗಳನ್ನು ನಿಗ್ರಹಿಸಬೇಕು. ಪುತ್ತೂರು ಕೆದಿಲದ ಜಯರಾಮ್, ಡಿ.21ರಂದು ಬಂಟ್ವಾಳದ ಗಡಿಯಾರ ಬಳಿ ಶಾಲೆ ದಿನಗಳ ಗೆಳತಿ ಮುಸ್ಲಿಂ ಮಹಿಳೆ ಜತೆ ಮಾತನಾಡುತ್ತಿದ್ದ ಕಾರಣಕ್ಕೆ ಮುಸ್ಲಿಂ ಮತಾಂಧರಿಂದ ದಾಳಿ ನಡೆದಿದೆ. ಮರ್ಮಾಂಗಕ್ಕೆ ಘಾಸಿ ಮಾಡಿದ್ದಾರೆ. ಇದು ಕೇವಲ ಜಯರಾಮ್ ವಿರುದ್ಧ ದಾಳಿಯಲ್ಲ ಮಹಿಳೆಯರ ವಿರುದ್ಧವೂ ದಾಳಿಯಾಗಿದೆ. ಒಂದು ಧರ್ಮದ ಮಹಿಳೆ ಇನ್ನೊಂದು ಧರ್ಮದ ವ್ಯಕ್ತಿ ಜತೆ ಮಾತನಾಡಬಾರದು ಎಂಬದು ಸಂವಿಧಾನ ಆಶಯಗಳಿಗೆ ವಿರೋಧವಾಗಿದೆ.
ಡಿ.19ರಂದು ದೇರಳಕಟ್ಟೆ ವಿದ್ಯಾರ್ಥಿನಿ ಅಪಹರಿಸಿ ಬೆತ್ತಲೆಗೊಳಿಸಿ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ ಹೇಯ ಘಟನೆಯನ್ನು ಪೊಲೀಸರು ಕೇವಲ ಕ್ರಿಮಿನಲ್ ಪ್ರಕರಣ ಎಂದು ಪರಿಗಣಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಅವರೆಲ್ಲರ ವಿರುದ್ಧ ಜಾಮೀನು ರಹಿತ ಮೊಕದ್ದಮೆ ದಾಖಲಿಸಬೇಕು.
ಪಿಲಿಕುಳ ಉದ್ಯಾನವನದಲ್ಲಿ ಪಿಯುಸಿ ವಿದ್ಯಾರ್ಥಿನಿಯರು ಒಟ್ಟಾಗಿದ್ದ ವೇಳೆ ಹಿಂದೂ ಕೋಮುವಾದಿ ಸಂಘಟನೆಗಳ ಗುಂಪು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸರು ಹೆತ್ತವರಿಗೆ ಹೇಳಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಇದು ಪೊಲೀಸರು ಕೋಮುವಾದಿ ಸಂಘಟನೆಗಳ ಜತೆ ಇರುವ ನಂಟನ್ನು ಬಹಿರಂಗಪಡಿಸುತ್ತದೆ. ಈ ಎಲ್ಲ ಪ್ರಕರಣಗಳಲ್ಲಿ ಪೊಲೀಸರ ನಿಷ್ಕ್ರಿಯತೆ ಕಾಣುತ್ತಿದೆ. ಆರೋಪಿಗಳನ್ನು ಬಂಧಿಸುವ ಬದಲು ಸಂತ್ರಸ್ತರಿಗೆ ಕಿರುಕುಳ ನೀಡಲಾಗುತ್ತಿದೆ. ದೌರ್ಜನ್ಯ ತಡೆಗಟ್ಟದೆ ಇದ್ದಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಜನವಾದಿ ಸಂಘಟನೆ ಅಧ್ಯಕ್ಷೆ ವಿ. ಗೀತಾ, ಉಪಾಧ್ಯಕ್ಷೆ ಕೆ.ಎಸ್.ವಿಮಲಾ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಲಕ್ಷ್ಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.